ದಾವಣಗೆರೆ : ಜ. 5ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಕನಕದಾಸರ ಜಯಂತಿ ಹಾಗೂ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಹಿಂದ ಮುಖಂಡ ಹೊದಿಗೆರೆ ರಮೇಶ್ ಹೇಳಿದರು. ಬೀರೇಶ್ವರ ವಿದ್ಯಾವರ್ಧಕ ಸಂಘದ ಕುರುಬರ ಹಾಸ್ಟೆಲ್‌ನಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ನಂತರ ಅವರು ಮಾಹಿತಿ ನೀಡಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದು ಅದ್ದೂರಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಕುರುಬ ಸಮುದಾಯ ಮಾತ್ರವಲ್ಲದೇ ನಾಯಕ, ಉಪ್ಪಾರ ಸೇರಿದಂತೆ ಎಲ್ಲ ಶೋಷಿತ ಸಮುದಾಯಗಳ ನಾಯಕರು ಸೇರಿ ಪಕ್ಷಾತೀತವಾಗಿ ಸಮಾವೇಶ ನಡೆಸುತ್ತಿದ್ದೇವೆ. ಶೋಷಿತ ಸಮುದಾಯಗಳ ಹಕ್ಕೊತ್ತಾಯಗಳನ್ನು ಅಂದಿನ ಸಮಾವೇಶದಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಮಾವೇಶದ ಬಗ್ಗೆ ಶೀಘ್ರವೇ ಚರ್ಚಿಸಲಾಗುವುದು. ಡಿ. 22ರಂದು ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿದರು. ಕಾಂತರಾಜ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಬುಧವಾರ ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ಶೋಷಿತ ಸಮುದಾಯಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದರು. ಮುಖಂಡರಾದ ಬಿ.ವೀರಣ್ಣ, ವೀರೇಶ್ ನಾಯ್ಕ, ಮೌನೇಶ್ವರ ಆಚಾರ್, ಪ್ರವೀಣ್ ಯಾದವ್, ಅನೀಸ್ ಪಾಷ, ಜೆ.ಸಿ.ನಿಂಗಪ್ಪ, ಜಯದೇವ ನಾಯ್ಕ, ನಾಗರಾಜ್ ಛಲವಾದಿ, ವನಜಾ ಕರಿಯಪ್ಪ, ಕಾವೇರಿ, ಕವಿತಾ ಚಂದ್ರಶೇಖರ್, ಎಸ್.ಎಸ್. ಗಿರೀಶ್, ಎಸ್.ಎಲ್. ಆನಂದಪ್ಪ, ಬಿ.ನಿಂಗರಾಜ್, ಇಟ್ಟಿಗುಡಿ ಮಂಜುನಾಥ್, ದೀಪಕ್ ಜೋಗಪ್ಪನವರ್, ಮಂಜು ಕೊಗ್ಗನೂರು ಇದ್ದರು.