ದಾವಣಗೆರೆ : ಶೋಷಿತ ಸಮುದಾಯಗಳು ಬರುವ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ಆಶಯಗಳಿಗೆ ಬೆಲೆ ಕೊಡುವ ಮೂಲಕ ಅದನ್ನು ಪಾಲನೆ ಮಾಡುವ ಜಾತ್ಯತೀತ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದಿಂದ ನಗರದ ಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಲಿತ ಶೋಷಿತರ ಹಕ್ಕುಗಳಿಗೆ ಆಗ್ರಹಿಸಿ ಜಿಲ್ಲಾಮಟ್ಟದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಸಂವಿಧಾನ ಅನುಷ್ಠಾನಗೊಳಿಸಲು ಇಷ್ಟವಿಲ್ಲ. ಪದೇಪದೆ ಸಂವಿಧಾನ ಬದಲಾವಣೆ ಮಾಡುವ ಮಾತುಗಳು ಕೇಳಿಬರುತ್ತಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಲು ಹೇಸುವುದಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದಲಿತರಿಗೆ ಅನುಕೂಲವಾಗುವಂತಹ ಯಾವುದೇ ಕಾಯ್ದೆ ಜಾರಿಗೊಂಡಿಲ್ಲ. ಉಳ್ಳವರು ಯಾವುದೇ ಅರ್ಜಿ ನೀಡದಿದ್ದರೂ ಶೇ.10ರಷ್ಟು ಮೀಸಲಾತಿ ನೀಡಿರುವ ಸರ್ಕಾರ ಶೋಷಿತ ವರ್ಗದವರು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಷ್ಟ್ರದಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧರು ಸೇರಿದಂತೆ ಶೇ.21ರಷ್ಟು ಜನರನ್ನು ಹೊರಗಿಟ್ಟು ಆಡಳಿತ ನಡೆಸುತ್ತಿರುವ ಪ್ರಧಾನಿಗಳು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಜಾರಿಗೊಳಿಸಿ ಪ್ರತಿವರ್ಷ 34 ಸಾವಿರ ಕೋಟಿ ಹಣವನ್ನು ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಿ ಆರ್ಥಿಕ ಸ್ವಾವಲಂಬನೆ ತಂದುಕೊಟ್ಟಿದೆ ಎಂದು ಹೇಳಿದರು.
ಕಳೆದ ಐದಾರು ವರ್ಷಗಳಲ್ಲಿ ಯೋಜನೆಯಡಿ ಕೆಲವು ನ್ಯೂನತೆ ಉಂಟಾಗಿದ್ದು, ಯೋಜನೆಯ ಹಣ ದುರ್ಬಳಕೆ ಮಾಡಿಕೊಳ್ಳದೆ ಸಂಪೂರ್ಣ ಹಣವನ್ನು ಸಮುದಾಯಕ್ಕೆ ದೊರಕಿಸುವ ಉದ್ದೇಶದಿಂದ ಬೆಳಗಾವಿ ಅದಿವೇಶನದಲ್ಲಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಸಮಾಜ ಕುಂಠಿತಗೊಳ್ಳುತ್ತದೆ. ಹೀಗಾಗಿ, ಸಂಘಟನೆ ಮುಖಂಡರು ಸಮಾಜದ ಯುವಕರ ಶಿಕ್ಷಣಕ್ಕೆ ಒತ್ತು ನೀಡಬೇಕು ಹಾಗೂ ಚಿಂತನ-ಮಂಥನ ಸಭೆ ನಡೆಸಿ ಛಿದ್ರಗೊಂಡ ಸಂಘಟನೆ ಒಂದೇ ವೇದಿಕೆಗೆ ತರುವ ಮೂಲಕ ಸಂಘಟನೆ ಮತ್ತು ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳ ಪರವಿರುವ ಸರ್ಕಾರವಾಗಿದೆ. ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡಜನರು ಜೀವನ ನಡೆಸದ ಸ್ಥಿತಿ ತಲುಪಿದ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಕೈಹಿಡಿದಿವೆ. ಬಡವರನ್ನು ಸೋಮಾರಿಗಳನ್ನಾಗಿ ಮಾಡಿದ್ದಾರೆ ಎಂದು ಹೇಳುವ ಬಿಜೆಪಿಗರು ಬಿಟ್ಟಿಗಳು ಎಂದು ಟೀಕಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುವಾದಿಗಳಿಗೆ ಸಂವಿಧಾನ ನುಂಗಲಾರದ ತುತ್ತಾಗಿದ್ದು, ಸಂವಿಧಾನ ಬದಲಾಯಿಸುವ ಹುನ್ನಾರ ನಿರಂತರ ನಡೆದಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ಡಾ.ಎ.ಬಿ. ರಾಮಚಂದ್ರಪ್ಪ, ಇನ್ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯಕುಮಾರ್, ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಚ್.ಜಿ. ಉಮೇಶ್, ವಕೀಲ ಅನೀಸ್ ಪಾಷಾ, ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ, ಪಾಲಿಕೆ ಮಾಜಿ ಮಹಾಪೌರ ಎಸ್.ಟಿ. ವೀರೇಶ್ ಇತರರು ಇದ್ದರು.
ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಪುರಂದರ ಲೋಕಿಕೆರೆ ಮತ್ತು ತಂಡದವರು ಕ್ರಾಂತಿಗೀತೆ ಹಾಡಿದರು. ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ನಾಗಪ್ಳ ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು. ಸಮಿತಿಯ ಬೆಂಗಳೂರು ವಿಭಾಗೀಯ ಪ್ರಧಾನ ಸಂಚಾಲಕ ಬಿ.ಎನ್. ಜೀವೇಶಿ ಪ್ರಾಸ್ತಾವಿಕ ಮಾತನಾಡಿದರು.