ದಾವಣಗೆರೆ : ಮನುಷ್ಯನಿಗೆ ಸಂಸ್ಕಾರವಿಲ್ಲದಿದ್ದರೆ ಸಹಕಾರವಿಲ್ಲ. ಸಹಕಾರ ಇಲ್ಲದಿದ್ದರೆ ಉದ್ಧಾರವಿಲ್ಲ ಎಂದು ಸಹಕಾರ ಭಾರತಿ ರಾಜ್ಯಾಧ್ಯಕ್ಷ, ರೊಟೇರಿಯನ್ ಎಂ.ಆರ್. ಪ್ರಭುದೇವ್ ಅಭಿಪ್ರಾಯಪಟ್ಟರು. ಅವರು ಸಹಕಾರ ಭಾರತಿ ರಾಜ್ಯಾಧ್ಯಕ್ಷರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ವಿದ್ಯಾನಗರ ದಾವಣಗೆರೆ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಹಕಾರ ತತ್ವ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಹಕಾರ ಭಾರತಿ ಈ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಪ್ರಾಥಮಿಕ ಹಾಗೂ ಮೂಲಭೂತ ಶಿಕ್ಷಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಯೋಜನೆ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ 16 ಜನ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉತ್ತಮ ಕ್ರೀಡಾ ಗುಣಮಟ್ಟದ ಸೈಕಲ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ವಿದ್ಯಾನಗರ ಅಧ್ಯಕ್ಷ ರೊಟೇರಿಯನ್ ಎಸ್.ಎನ್. ಮಳವಳ್ಳಿ ವಹಿಸಿದ್ದರು. ಡಾ.ಜೆ.ಬಿ. ರಾಜ್ ಪ್ರಾಸ್ತಾವಿಕ ಮಾತನಾಡಿದರು. ಎಸ್.ಸಿ. ಮಹಾರುದ್ರಪ್ಪ ಅತಿಥಿಗಳನ್ನು ಪರಿಚಯಿಸಿದರು. ರೋಟರಿ ಅಸಿಸ್ಟಂಟ್ ಗವರ್ನರ್ ಎಂ.ಎನ್. ಬಿಲ್ಲಳ್ಳಿ, ಇನ್ನರ್ ವ್ಹೀಲ್ ಚಾರ್ಟರ್ ಅಧ್ಯಕ್ಷೆ ಸುಲೋಚನಮ್ಮ ರಾಜಶೇಖರ್, ಇನ್ನರ್‌ವ್ಹೀಲ್ ಹಾಲಿ ಅಧ್ಯಕ್ಷೆ ಪ್ರೇಮ ಮಹೇಶ್ವರಪ್ಪ ಭಾಗವಹಿಸಿದ್ದರು. ಪ್ರೊ. ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರ್ವಹಿಸಿದರು. ಸಿ.ಕೆ. ಸಿದ್ದಪ್ಪ ವಂದಿಸಿದರು. ರೋಟರಿ ಹಾಗೂ ಇನ್ನರ್ ವ್ಹೀಲ್ ಸದಸ್ಯರು, ವಿದ್ಯಾರ್ಥಿನಿಯರು, ಪಾಲಕರು ಭಾಗವಹಿಸಿದ್ದರು.