ಜಿಲ್ಲೆ

ಅಪಘಾತ ವಲಯಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚನೆ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯ ಅಪಘಾತ ವಲಯಗಳಲ್ಲಿ ಕಾಲಮಿತಿಯೊಳಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.  ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ರಸ್ತೆಗಳಲ್ಲಿ ಅಪಘಾತ, ಸಾವು ನೋವುಗಳು ಕಡಿಮೆಯಾಗಬೇಕು. ಒಂದೂವರೆ ತಿಂಗಳೊಳಗೆ ಎಲ್ಲವನ್ನೂ ಸರಿಪಡಿಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದರು.  ಜಿಲ್ಲೆಯಲ್ಲಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿರುವ ಅಪಘಾತ ವಲಯಗಳ (ಬ್ಲಾೃಕ್ ಸ್ಪಾಟ್) ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅವೈಜ್ಞಾನಿಕ ಹಂಪ್‌ಗಳನ್ನು ಸರಿಪಡಿಸಬೇಕು. ಬಿಡಾಡಿ ದನಗಳು ರಸ್ತೆಯಲ್ಲಿ ಓಡಾಡದಂತೆ ಕ್ರಮ ಕೈಗೊಳ್ಳಬೇಕು. ಸೂಚನಾ ಫಲಕಗಳ ಅಳವಡಿಕೆ, ವಿದ್ಯುದ್ದೀಪಗಳ ವ್ಯವಸ್ಥೆ, ಬ್ಯಾರಿಕೇಡ್ ಹಾಕುವುದು ಸೇರಿ ಅನೇಕ ಅಂಶಗಳ ಮೇಲೆ ಬೆಳಕು ಚೆಲ್ಲಲಾಯಿತು.  ಸವಳಂಗ-ಚಿನ್ನಿಕಟ್ಟೆ ರಸ್ತೆಯಲ್ಲಿ ಈ ವರ್ಷ ಸಂಭವಿಸಿದ ವಿವಿಧ ಅಪಘಾತಗಳಲ್ಲಿ 8 ಜನರು ಮೃತಪಟ್ಟಿದ್ದು 13 ಮಂದಿ ಗಾಯಗೊಂಡಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ಸಭೆಯ ಗಮನ ಸೆಳದರು.  ಬ್ಯಾಲದಹಳ್ಳಿ-ನಂದಿಗುಡಿ ಕ್ರಾಸ್, ರಾಜನಹಳ್ಳಿ-ಜಾಕ್‌ವೆಲ್ ಬ್ರಿಡ್ಜ್, ಬಾಡಾ ಕ್ರಾಸ್, ಹದಡಿ, ಕುಕ್ಕುವಾಡ ಸೇತುವೆ, ಹಳೇಬಾತಿ ಬ್ರಿಡ್ಜ್, ನಗರದ ಎಸ್‌ಎಸ್ ಆಸ್ಪತ್ರೆ ಬಳಿಯ ರೈಲ್ವೆ ಕೆಳಸೇತುವೆ, ಹೀಗೆ ಒಂದೊಂದೇ ಅಪಘಾತ ವಲಯಗಳಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.  ರಸ್ತೆ ತಿರುವುಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಮಳೆ ನೀರು ನಿಂತಿರುವ ಕಡೆ ಕೈಗೊಳ್ಳಬೇಕಾದ ಕ್ರಮಗಳು, ಅಗತ್ಯವಿರುವ ಕಡೆ ಕ್ಯಾಮರಾ, ಮಿರರ್ ಅಳವಡಿಸದಿರುವುದು ಇವೇ ಮುಂತಾದ ಲೋಪಗಳನ್ನು ಪಟ್ಟಿ ಮಾಡಲಾಯಿತು.  ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇನ್ ಡಿಸಿಪ್ಲಿನ್ ಉಲ್ಲಂಘನೆ ಮಾಡುವ ವಾಹನ ಚಾಲಕರಿಗೆ ದಂಡ ವಿಧಿಸಬೇಕು. ಕೆಲವರ ಲೈಸೆನ್ಸ್ ರದ್ದುಗೊಳಿಸುವ ಮೂಲಕ ಬಿಸಿ ಮುಟ್ಟಿಸಬೇಕು ಎಂದು ಡಿಸಿ ಗಂಗಾಧರಸ್ವಾಮಿ ಸೂಚಿಸಿದರು.  ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಜಾರಿಗೊಳಿಸಬೇಕು. ಜನರಿಗೆ ಹೆಲ್ಮೆಟ್ ಧರಿಸುವುದರ ಮಹತ್ವವನ್ನು ಅರ್ಥ ಮಾಡಿಸಬೇಕು. ಕಟ್ಟಡ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.  ಸ್ಮಾರ್ಟ್‌ಸಿಟಿ ಡಿಜಿಎಂ ಮಮತಾ ಮಾತನಾಡಿ, ಅಪಘಾತ ವಲಯಗಳಲ್ಲಿ ಕ್ಯಾಮರಾ ಅಳವಡಿಸುವ ಮೂಲಕ ಅಲ್ಲಿನ ಚಿತ್ರಣವನ್ನು ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, 20 ಕಡೆಗಳಲ್ಲಿ ಪ್ರಾಯೋಗಿಕವಾಗಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿದರು.  ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು, ಆರ್‌ಟಿಒ ಸಿ.ಎಸ್. ಪ್ರಮುತೇಶ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಹೆಚ್ಚುವರಿ ಎಸ್ಪಿ ವಿಜಯ ಕುಮಾರ್ ಎಂ. ಸಂತೋಷ್, ಡಿವೈಎಸ್ಪಿ ಬಸವರಾಜ, ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್.ಕೆ. ಪಟೇಲ್, ಡಿಯುಡಿಸಿ ಯೋಜನಾ ನಿರ್ದೇಶಕ ಡಾ.ಎನ್. ಮಹಾಂತೇಶ್ ಇದ್ದರು.  ...  (ಬಾಕ್ಸ್)  ಹೆದ್ದಾರಿ ಅಧಿಕಾರಿಗಳ ವಿರುದ್ಧ ಅಸಮಾಧಾನ  ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಡಿಸಿ ಗಂಗಾಧರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.  ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಗಳ ಅನುಪಾಲನೆ ಮಾಡಿಲ್ಲ. ಈ ನಡವಳಿಕೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.  ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸೂಚನಾ ಫಲಕಗಳನ್ನು ಸೂಕ್ತ ಜಾಗದಲ್ಲಿ ಅಳವಡಿಸಬೇಕು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜತೆಗೆ ಸಮನ್ವಯದ ಕೊರತೆಯಿದೆ. ಇದನ್ನು ತಿದ್ದಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ...    (ಕೋಟ್)  ಆಡಳಿತ ವ್ಯವಸ್ಥೆಯಲ್ಲಿ ಎಲ್ಲರೂ ಬಾಸ್‌ಗಳಂತೆ ಹೇಳುವವರೇ ಆದರೆ ಕೆಲಸ ಮಾಡುವವರು ಯಾರು?. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?, ನಮ್ಮ ಕರ್ಮಗಳನ್ನು ಮಾಡಬೇಕು, ಫಲಾಪೇಕ್ಷೆ ಇರಬಾರದು.   ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ  ...    (ಕೋಟ್)  ಲಾರಿಗಳನ್ನು ನಿಲುಗಡೆ ಮಾಡಲು ಟ್ರಜ್ ಟರ್ಮಿನಲ್‌ನ ಶಾಶ್ವತ ವ್ಯವಸ್ಥೆಯಾಗಬೇಕು. ರಸ್ತೆ ಬದಿ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಸೂಕ್ತ ಜಾಗವನ್ನು ನಿಗದಿ ಮಾಡಬೇಕು. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳನ್ನು ಅಳವಡಿಸಲಾಗುತ್ತಿದ್ದು ಇದನ್ನು ತಡೆಗಟ್ಟಬೇಕಿದೆ.   ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ