ಜಿಲ್ಲೆ

ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯಲ್ಲಿ ಗುರುತಿಸಲಾಗಿರುವ 28 ಅಪಘಾತ ಸ್ಥಳಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ಸಂಚಾರ ಸುಗಮಗೊಳಿಸಲು ಬೇಕಾದ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ, ಜಿಲ್ಲಾ ಪೊಲೀಸ್ ಇಲಾಖೆಯಿಂದ ನಡೆಸಿದ ಅಪಘಾತ ಸ್ಥಳಗಳ ಸಮೀಕ್ಷೆಯ ವಿವರಗಳನ್ನು ಮಂಡಿಸಲಾಯಿತು.
 ಸೂಚನಾ ಫಲಕ ಅಳವಡಿಸದಿರುವುದು, ರಸ್ತೆಯ ತಿರುವಿನಲ್ಲಿ ಗಿಡಗಳು ಬೆಳೆದಿರುವುದು, ಬಸ್ ನಿಲ್ದಾಣ ಇಲ್ಲದಿರುವುದು, ರಸ್ತೆಯ ಮಾರ್ಕಿಂಗ್ ಮಾಡದಿರುವುದು, ಸರ್ವೀಸ್ ರಸ್ತೆ ಇಲ್ಲದಿರುವುದು, ಸೇತುವೆ ಕಿರಿದಾಗಿರುವುದು, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದು, ರಿಫ್ಲೆಕ್ಟರ್ ಅಳವಡಿಸದಿರುವುದು, ಹೆದ್ದಾರಿ ಮೇಲೆ ನೀರು ನಿಲ್ಲುವುದು, ಎಲ್ಲೆಂದರಲ್ಲಿ ವಾಹನ ನಿಲುಗಡೆ ಹೀಗೆ ಅಪಘಾತದ ಹಲವು ಕಾರಣಗಳನ್ನು ಪಟ್ಟಿ ಮಾಡಲಾಯಿತು.
 ಈ ಹಿಂದೆ ಪ್ರಧಾನಿಯವರ ಬೆಂಗಾವಲು ಪಡೆಯ ವಾಹನ ಸಾಗುವಾಗ ದಾವಣಗೆರೆ ಹೊರ ವಲಯದ ಎಸ್.ಎಸ್. ಆಸ್ಪತ್ರೆಯ ಬಳಿ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಆಗಿದ್ದ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.
 ಅಗತ್ಯವಿರುವ ಕಡೆಗಳಲ್ಲಿ ಒಂದು ವಾರದೊಳಗೆ ಬ್ಲಿಂಕರ್‌ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
 ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಆಸಕ್ತಿ ತೋರಬೇಕು. ಈ ಹಿಂದಿನ ಸಭೆಗಳಲ್ಲಿ ಮಂಡನೆಯಾದ ವಿಚಾರಗಳನ್ನು ಗಮನಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
 ನಗರಕ್ಕೆ ಪ್ರತಿ ದಿನ 200 ರಿಂದ 300 ಲಾರಿಗಳು ಬರುವುದರಿಂದ ಅವುಗಳ ನಿಲುಗಡೆಗೆ ಟ್ರಕ್ ಟರ್ಮಿನಲ್ ಅಗತ್ಯವಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಗಮನ ಸೆಳೆದರು.
 ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್, ದೂಡಾ ಆಯುಕ್ತ ಬಸವನಗೌಡ ಕೋಟೂರ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ದೀಕ್ಷಿತ್, ಅಣ್ಣಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು. ಅಪಘಾತ ಸ್ಥಳಗಳ ಸಮೀಕ್ಷೆಯ ವರದಿಯನ್ನು ಪೊಲೀಸ್ ಕಾನ್‌ಸ್ಟೇಬಲ್ ಅಂಬರೀಶ್ ಮಂಡಿಸಿದರು.
 ...
 * ಅಧಿಕಾರಿಗಳ ತಂಡ ರಚನೆ
 ನಗರದ ಹೊರ ವಲಯದಲ್ಲಿರುವ ಬಾಡಾಕ್ರಾಸ್ ಪ್ರದೇಶದಲ್ಲಿ ಸಂಚಾರಕ್ಕೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಲು ವಿವಿಧ ಇಲಾಖೆಯ ಅಧಿಕಾರಿಗಳ ತಂಡವೊಂದನ್ನು ರಚಿಸುವಂತೆ ಡಿಸಿ ತಿಳಿಸಿದರು.
 ಬಾಡಾ ಕ್ರಾಸ್‌ನಲ್ಲಿ 3 ಬಾರ್‌ಗಳು ಮತ್ತು ಮಾಂಸಾಹಾರದ ಹೋಟೆಲ್‌ಗಳಿವೆ. ಅಲ್ಲಿ ಫುಟ್‌ಪಾತ್ ಒತ್ತುವರಿಯಾಗಿದೆ. ಇದರಿಂದಾಗಿ ವಾಹನಗಳನ್ನು ರಸ್ತೆಯ ಮೇಲೆಯೇ ನಿಲ್ಲಿಸುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಂಚಾರ ಠಾಣೆಯ ಪೊಲೀಸ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
 ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಬೇಕು. ಸೂಕ್ತ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.