ಜಿಲ್ಲೆ

ಮಾನವ ಹಕ್ಕು ಉಲ್ಲಂಘನೆ ತಡೆಗೆ ಸಹಕಾರ ಅಗತ್ಯ

ರಮೇಶ ಜಹಗೀರದಾರ್

ದಾವಣಗೆರೆ : ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಿ, ಪ್ರತಿಯೊಬ್ಬರೂ ಗೌರವಯುತ ಜೀವನ ಸಾಗಿಸುವಂತಾಗಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರೆಣ್ಣವರ ಹೇಳಿದರು.
 ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ‘ಸ್ವಾತಂತ್ರೃ, ಸಮಾನತೆ ಮತ್ತು ಎಲ್ಲರಿಗೂ ನ್ಯಾಯ’ ಇದು ಈ ವರ್ಷದ ಘೋಷ ವಾಕ್ಯ. ಇವು ನಮ್ಮ ಸಂವಿಧಾನದ ಆಶಯಗಳೂ ಆಗಿವೆ. ಮನುಷ್ಯನಿಗೆ ಬದುಕು ನಡೆಸಲು ಅಗತ್ಯ ಸೌಲಭ್ಯಗಳು ಸಿಗಬೇಕು. ಜತೆಗೆ ಪರಿಸರ ನೀಡಿರುವ ಹಕ್ಕನ್ನೂ ಯಾರೂ ಕಸಿಯಬಾರದು ಎಂದು ಅಭಿಪ್ರಾಯಪಟ್ಟರು.
 ಯುದ್ಧಗಳಲ್ಲಿ ಸಂಭವಿಸಿದ ಸಾವು, ನೋವು, ಮಾನವ ಹಕ್ಕುಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ 1948 ರ ಪ್ಯಾರಿಸ್ ಅಧಿವೇಶನದಲ್ಲಿ ಮಾನವಹಕ್ಕುಗಳ ರಕ್ಷಣೆಯ ಬಗ್ಗೆ ಜಗತ್ತಿಗೇ ಸಾರಿತು. ಅಂದಿನಿಂದಲೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.
 ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಯಾವುದೇ ನಾಗರಿಕತೆಯನ್ನು ಗಮನಿಸಿದರೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಲೇ ಬಂದಿದೆ. ಪ್ರತಿಯೊಬ್ಬರೂ ಅರ್ಥಪೂರ್ಣವಾದ, ನಿರ್ಭೀತಿಯ ಜೀವನ ನಡೆಸುವಂತಾಗಬೇಕು. ಈ ಬಗ್ಗೆ ಜಾಗೃತಿ ಮೂಡಬೇಕು ಎಂದು ಹೇಳಿದರು.
 ಮಾನವ ಹಕ್ಕುಗಳ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ಅದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ, ಜೀತಪದ್ಧತಿ ಮುಂತಾದ ಅನಿಷ್ಟಗಳು ದೂರವಾಗಬೇಕು ಎಂದು ತಿಳಿಸಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಹುಟ್ಟಿನಿಂದಲೇ ಮಾನವ ಹಕ್ಕುಗಳು ಬಂದಿರುತ್ತವೆ. ಅವುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
 ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು. ಸಾರ್ವಜನಿಕರೊಂದಿಗೆ ಪೊಲೀಸರು ಸರಿಯಾಗಿ ವರ್ತಿಸಬೇಕು. ಮಹಿಳಾ ದೌರ್ಜನ್ಯ ತಡೆಗಟ್ಟಬೇಕು, ಶಿಕ್ಷಣ ಹಕ್ಕು ಸಮರ್ಪಕವಾಗಿ ದೊರೆಯಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಮಾನವ ಹಕ್ಕುಗಳು ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.
 ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್ ಉಪನ್ಯಾಸ ನೀಡಿ, ಮಾನವ ಹಕ್ಕುಗಳು ಘೋಷಣೆಯಾಗಿ 75 ವರ್ಷ ಕಳೆದಿದ್ದರೂ ಈಗಲೂ ಯುದ್ಧ, ಜನಾಂಗೀಯ ದ್ವೇಷ, ಜಾತಿ ಕಚ್ಚಾಟ ನಡೆಯುತ್ತಿವೆ, ಜೀವ ಹಾನಿಯಾಗುತ್ತಿದೆ ಎಂದು ವಿಷಾದಿಸಿದರು.
 ದೇಶದಲ್ಲಿ ಅಲ್ಪಸಂಖ್ಯಾತರು, ಆದಿವಾಸಿಗಳು, ಶೋಷಿತರು, ಮಹಿಳೆಯರು, ಮಕ್ಕಳು ಇದ್ದಾರೆ. ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ರಾಜ್ಯದಲ್ಲಿ ಭ್ರೂಣಹತ್ಯೆಯ ಪಿಡುಗು ಆತಂಕ ಮೂಡಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
 ಕಾರ್ಪೊರೇಟ್ ಯುಗದಲ್ಲಿ ಬಂಡವಾಳಶಾಹಿಗಳು ಬಲಾಢ್ಯರಾಗುತ್ತಿದ್ದಾರೆ. ತಳ ಸಮುದಾಯಗಳು, ಬಡವರು ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಮೂಲಭೂತ ಹಕ್ಕುಗಳಾಗಬೇಕಾದ ಶಿಕ್ಷಣ ಮತ್ತು ಆರೋಗ್ಯ ಸರ್ಕಾರದ ಸೌಲಭ್ಯಗಳಾಗಿ ಮಾರ್ಪಟ್ಟಿವೆ ಎಂದು ಹೇಳಿದರು.
 ನಿವೃತ್ತ ನ್ಯಾಯಾಧೀಶ ಹಾಲಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು.