ಜಿಲ್ಲೆ

ಒಳಮೀಸಲು ಜಾರಿ ವಿಳಂಬ ಸಹಿಸಲು ಸಾಧ್ಯವಿಲ್ಲ

ರಮೇಶ ಜಹಗೀರದಾರ್

ದಾವಣಗೆರೆ : ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿ ವರ್ಷ ಕಳೆದರೂ, ಮೀಸಲು ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ವಿಳಂಬವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.  ಸಮಿತಿಯ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲು ಕಲ್ಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ ಸುಪ್ರೀಂ ಕೋರ್ಟ್ 2024ರ ಆ. 1ರಂದು ಆದೇಶ ಹೊರಡಿಸಿತ್ತು. ದತ್ತಾಂಶ ಸಂಗ್ರಹಿಸಲು ಸರ್ಕಾರ ಎಚ್.ಎಸ್. ನಾಗಮೋಹನದಾಸ್ ಆಯೋಗ ರಚನೆ ಮಾಡಿದ್ದು ಸ್ವಾಗತಾರ್ಹ. ಆದರೆ, ವರದಿಯನ್ನು ಸ್ವೀಕರಿಸಿ ಶೀಘ್ರ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.  ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ 30 ವರ್ಷಗಳಿಂದ ಹೋರಾಟ ನಡೆದಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಪರಿಶಿಷ್ಟ ಜಾತಿಯಲ್ಲಿ ಆಶಾಕಿರಣ ಮೂಡಿದೆ. ಒಳಮೀಸಲು ಇತ್ಯರ್ಥವಾಗದ ಕಾರಣಕ್ಕೆ ಸರ್ಕಾರಿ ನೇಮಕಾತಿ ಕೂಡ ನನೆಗುದಿಗೆ ಬಿದ್ದಿದೆ. ಇದರಿಂದ ನಿರುದ್ಯೋಗ ಸಮಸ್ಯೆ ತಲೆದೋರಿದೆ. ನಾಗಮೋಹನದಾಸ್ ಆಯೋಗದ ವರದಿಯನ್ನು ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಬೇಕು. ವಿಪಕ್ಷಗಳು ಕೂಡ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.  ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಜಿ.ಎಸ್.ಲೋಕೇಶ್, ಮುಖಂಡರಾದ ಲಿಂಗರಾಜು, ಚನ್ನಬಸವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.