ದಾವಣಗೆರೆ : ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿಯ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸುವ ಮೂಲಕ ಎಲ್ಲ ಹಿಂದುಳಿದವರಿಗೂ ಪ್ರಯೋಜನ ಆಗುವಂತೆ ಮಾಡಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದಿಂದ ನಗರದ ದೇವರಾಜ ಅರಸು ಬಡಾವಣೆಯ ‘ಬಿ’ ಬ್ಲಾಕ್‌ನಲ್ಲಿ ನಿರ್ಮಿಸಿರುವ ಶ್ರೀ ಭವಾನಿ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ತಮಿಳುನಾಡಿನಲ್ಲಿ ಶೇ. 69 ರಷ್ಟು ಮೀಸಲಾತಿ ಇದೆ. ಇತರ ಕೆಲ ರಾಜ್ಯಗಳಲ್ಲೂ ಪ್ರಯತ್ನ ನಡೆದಿದೆ. ಸಣ್ಣ, ಹಿಂದುಳಿದ ಸಮುದಾಯಗಳು ಅಭಿವೃದ್ಧಿಯಾಗಬೇಕಾದರೆ ಮೀಸಲಾತಿಯ ಲಾಭ ಸಿಗಲೇಬೇಕು ಎಂದು ಪ್ರತಿಪಾದಿಸಿದರು.
ನಮ್ಮ ಸಮಾಜದವರು ಶಿವಾಜಿ ಜಯಂತಿ ಆಚರಣೆಗೆ ಸೀಮಿತವಾಗಬಾರದು. ಯುವಜನರು ಕೌಶಲಗಳನ್ನು ಬೆಳೆಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಶಿವಾಜಿ ಮಹಾರಾಜರು ಹಿಂದುಗಳಿಗೆ ಸೀಮಿತ ಆಗಿರಲಿಲ್ಲ. ಅವರು ಯಾವುದೇ ಧರ್ಮದ ವಿರೋಧಿ ಆಗಿರಲಿಲ್ಲ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳ ಆಯೋಜಿಸಿದರೆ ಇಲಾಖೆಯಿಂದ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.
ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ರಾಜ್ಯಾಧ್ಯಕ್ಷ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಮೀಸಲಾತಿ ಕೊಡಲಿಲ್ಲ ಎಂಬ ಬೇಸರ ಬೇಡ. ಯುವಜನರು ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಕೊಂಡು ಮುಂದೆ ಬರಬೇಕು. ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ನಾನು ಒಳ ಮೀಸಲಾತಿಯ ಪರವಾಗಿದ್ದೇನೆ, ಅದು ಅವಶ್ಯಕವಾಗಿದೆ. ಕೆಲವರು ಕಾಂತರಾಜ ವರದಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಮೀಸಲಾತಿಯ ಪ್ರಯತ್ನ ಒಂದು ಕಡೆ ಇರಲಿ, ನಾವು ಗಟ್ಟಿಯಾಗುವುದು ಹೇಗೆ ಎಂಬ ಚಿಂತನೆ ಇರಬೇಕು. ಸ್ವಾವಲಂಬಿಗಳಾಗಬೇಕು ಎಂದರು.
ಸಮಾಜದ ಮುಖಂಡ ಯಶವಂತರಾವ್ ಜಾಧವ್ ಪ್ರಾಸ್ತಾವಿಕ ಮಾತನಾಡಿದರು. ಭವಾನಿ ಪೀಠದ ಶ್ರೀ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೇ, ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಪಾಗೋಜಿ, ಮುಖಂಡರಾದ ಗೋಪಾಲರಾವ್ ಮಾನೆ, ಮಯೂರ್, ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜ, ಎಂ.ಟಿ. ಸುಭಾಷ್‌ಚಂದ್ರ ಇದ್ದರು.
...
(ಬಾಕ್ಸ್)
ಮರಾಠ ಸಮಾಜದ ಜತೆಗಿರುವೆ
ಮರಾಠ ಸಮಾಜ ಸ್ವಾಭಿಮಾನಕ್ಕೆ ಹೆಸರಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುವ ಬದ್ಧತೆಯಿದೆ. ಈ ಸಮಾಜದ ಜತೆಗಿದ್ದು ಸಹಕಾರ ನೀಡುವುದಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸಂಸದರಿದ್ದಾಗ ವಿವಿಧ ಸಮಾಜಗಳಿಗೆ ತಾವು ಸಹಾಯ ಮಾಡಿದ್ದು ಮರಾಠ ಸಮಾಜಕ್ಕೂ ಅನುದಾನ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು.
ಮುಂದಿನ ದಿನಗಳಲ್ಲಿ ರಾಜಕೀಯ ಹೇಗೆ ತಿರುವು ಪಡೆದುಕೊಳ್ಳುವುದೋ ಗೊತ್ತಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿ ಒಡಕಿದೆ. ಯಾರನ್ನಾದರೂ ಚುನಾಯಿಸುವ ಶಕ್ತಿ ಜನರಿಗಿದೆ. ನಾವು ಜನರ ಸೇವಕರು. ಆ ಸೇವೆಯನ್ನು ಜನರು ಬಳಸಿಕೊಳ್ಳಬೇಕು ಎಂದರು.
ಮೂರೂವರೆ ವರ್ಷಗಳ ನಂತರ ವಿಧಾನಸಭೆ ಚುನಾವಣೆ, 4 ವರ್ಷಗಳ ನಂತರ ಲೋಕಸಭೆ ಚುನಾವಣೆ ಬರುತ್ತವೆ. ಮುಂದೇನಾಗುವುದೋ ಕಾದು ನೋಡೋಣ. ನಮ್ಮ ಸರ್ಕಾರ ಬಂದರೆ ಈ ಸಮಾಜಕ್ಕೆ ಇನ್ನಷ್ಟು ಸಹಾಯ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಮಾಜದ ಮುಖಂಡ ಯಶವಂತರಾವ್ ಜಾಧವ್ ಅವರಿಗೆ 4 ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಕೊಡಿಸಿದೆವು. ಬಹಳ ಅಲ್ಪ ಮತಗಳಿಂದ ಸೋತರು. ಆಗ ಇದೇ ಆಂಜನೇಯ ಅವರೇ ಸೋಲಿಸಿದರು ಎಂದು ವೇದಿಕೆಯಲ್ಲಿದ್ದ ಎಚ್. ಆಂಜನೇಯ ಅವರ ಕಾಲೆಳೆದರು.
ಗೆಲ್ಲುವ ಸನ್ನಿವೇಶ ಇದ್ದಾಗ ದುರದೃಷ್ಟವಶಾತ್ ನಮ್ಮ ಪಕ್ಷದವರು ಟಿಕೆಟ್ ಕೊಡಲಿಲ್ಲ. ಅವರನ್ನು ಯಾವುದಾದರೂ ನಿಗಮ, ಮಂಡಳಿಯ ಅಧ್ಯಕ್ಷರನ್ನಾಗಿ ಮಾಡುವಂತೆ ಕೇಳಿದರೂ ನಮ್ಮ ಸರ್ಕಾರ ಇದ್ದಾಗ ಮಾಡಲಿಲ್ಲ, ಈ ಬಗ್ಗೆ ನನಗೆ ನೋವಿದೆ ಎಂದರು.
...
(ಕೋಟ್)
ಮರಾಠ ಸಮುದಾಯದವರು ಶ್ರಮಜೀವಿಗಳು. ಈ ಸಮಾಜದವರ ಕೊಡುಗೆ ಅಪಾರವಾಗಿದೆ. ಶಿವಾಜಿ ಮತ್ತು ಶಾಹು ಮಹಾರಾಜರನ್ನು ನಾವು ಮರೆಯುವಂತಿಲ್ಲ. ನಾನು ಸಮಾಜಕಲ್ಯಾಣ ಸಚಿವನಿದ್ದಾಗ (2013-18) ಎಲ್ಲ ಸಮಾಜಗಳಿಗೆ ಅನುದಾನ ನೀಡಿದೆವು. ಮರಾಠ ಸಮಾಜದ ಈ ಕಲ್ಯಾಣ ಮಂಟಪ ಕಟ್ಟಲು 1 ಕೋಟಿ ರೂ. ಬಿಡುಗಡೆ ಮಾಡಿದ್ದೆ.
ಎಚ್. ಆಂಜನೇಯ, ಮಾಜಿ ಸಚಿವ
...