ದಾವಣಗೆರೆ : ರಾಜಕೀಯ ಒತ್ತಡಕ್ಕೆ ಮಣಿಯದೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಆಗ್ರಹಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರದಿ ಜಾರಿಗೆ ಬರುವುದನ್ನು ತಡೆಯುವ ಬಗ್ಗೆ ಚರ್ಚಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಅ. 22 ಕ್ಕೆ ವೀರಶೈವ-ಲಿಂಗಾಯತ ಮುಖಂಡರ ಸಭೆ ಕರೆದಿದೆ. ಈ ಕಾರಣಕ್ಕೆ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬಾರದು ಎಂದು ಹೇಳಿದರು. ವರದಿ ಅವೈಜ್ಞಾನಿಕವಾಗಿದೆ ಎಂದು ಮಹಾಸಭಾ ಮುಖಂಡರು ಆರೋಪಿಸಿದ್ದಾರೆ. ಅದರಲ್ಲಿ ಹುರುಳಿಲ್ಲ. ತಜ್ಞರು ವೈಜ್ಞಾನಿಕವಾಗಿಯೇ ಸಿದ್ಧಪಡಿಸಿದ್ದಾರೆ. ಕಚೇರಿಯಲ್ಲಿ ಕುಳಿತು ತಯಾರಿಸಿಲ್ಲ. 22,200 ಸಿಬ್ಬಂದಿ ರಾಜ್ಯಾದ್ಯಂತ ಓಡಾಡಿ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿಸಿದರು. ಸಮಾಜದಲ್ಲಿ ಅನೇಕ ಜಾತಿಯವರಿಗೆ ಧ್ವನಿ, ಪ್ರಾತಿನಿಧ್ಯ ಇಲ್ಲವಾಗಿದೆ. ನಿಜವಾದ ಅಂಕಿ ಅಂಶಗಳು ಹೊರ ಬಂದರೆ ಆ ವರ್ಗದವರು ಹಕ್ಕೊತ್ತಾಯ ಮಾಡುತ್ತಾರೆ ಎಂಬ ಆತಂಕ ಪ್ರಬಲ ಸಮುದಾಯದವರಿಗಿದೆ. ಇದೇ ಕಾರಣಕ್ಕೆ ಅವರು ವಿರೋಧಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಜಾತಿಗಣತಿ ವರದಿ ಜಾರಿ ಅನಿವಾರ್ಯವಾಗಿದೆ. ಅದರ ಆಧಾರದ ಮೇಲೆ ನೀತಿಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಾಗುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅನಿವಾರ್ಯವಾಗಿ ಕುರ್ಚಿ ಕಳೆದುಕೊಳ್ಳುವ ಸಂದರ್ಭ ಎದುರಾದರೂ ಪರವಾಗಿಲ್ಲ, ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿ ಶೇ. 80 ರಷ್ಟಿರುವ ಶೋಷಿತ ವರ್ಗಗಳು ಈ ವರದಿಯನ್ನು ಸ್ವಾಗತಿಸಿವೆ. ಶೇ. 15 ರಷ್ಟು ಜನ ವಿರೋಧಿಸುತ್ತಿದ್ದಾರೆ. ಶೇ. 5ರಷ್ಟು ಮಂದಿ ತಟಸ್ಥವಾಗಿದ್ದಾರೆ. ಬಹುಜನರ ಮನವಿಯನ್ನು ಸರ್ಕಾರ ಪುರಸ್ಕರಿಸಬೇಕು ಎಂದು ಆಗ್ರಹಿಸಿದರು. ಬಳಗದ ಮುಖಂಡರಾದ ಶಿವಕುಮಾರ ಡಿ. ಶೆಟ್ಟರ್, ಷಣ್ಮುಖಪ್ಪ ಸುದ್ದಿಗೋಷ್ಠಿಯಲ್ಲಿದ್ದರು.