ದಾವಣಗೆರೆ : ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ತಾಕತ್ತಿದ್ದರೆ ಅವರನ್ನು ಆ ಸ್ಥಾನದಿಂದ ಇಳಿಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಕೆಲ ನಾಯಕರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ, ಮರುಭೂಮಿಯಲ್ಲಿ ಒಯಸಿಸ್ ಸಿಕ್ಕಂತೆ ಪಕ್ಷಕ್ಕೆ ವಿಜಯೇಂದ್ರ ಸಿಕ್ಕಿದ್ದಾರೆ. ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಪ್ರಧಾನಿ ಮೋದಿ, ಅಮಿತ್ ಷಾ, ನಡ್ಡಾ ಮತ್ತು ಸಂತೋಷ್ ಅವರು ಎಂದು ತಿಳಿಸಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ವಿಜಯೇಂದ್ರ ಅವರನ್ನು ಸಿಎಂ ಮಾಡುತ್ತೇನೆ ಎಂದು ಅವರು ಹೇಳಿಲ್ಲ. ಆದರೆ ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಅಗುತ್ತಾರೆ, ಅದನ್ನು ತಪ್ಪಿಸಲು ಯಾವ ದುಷ್ಟ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಶಾಸಕ ರಮೇಶ ಜಾರಕಿಹೊಳಿ ರಾಜಕೀಯದಲ್ಲಿ ಕಣ್ಣು ಬಿಡುವುದಕ್ಕಿಂತ ಮುಂಚೆ ಬಿ.ಎಸ್. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಸಂಘಟನೆ ಮಾಡಿದ್ದಾರೆ. ಅಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ‘ಜೆಡಿಎಸ್‌ಗೆ ಹೋಗಿದ್ದ ಮಹಾನ್ ನಾಯಕ ನಂತರ ಯಡಿಯೂರಪ್ಪ ಅವರ ಕಾಲು ಹಿಡಿದು ಬಿಜೆಪಿಗೆ ಬಂದರು. ಈಗ ಯಡಿಯೂರಪ್ಪ ಅವರ ಬಗ್ಗೆಯೇ ಮಾತನಾಡಿದರೆ ಸಹಿಸುವುದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿರುವುದು ಹಿಂದು ವಿರೋಧಿ, ಕೊಲೆಗಡುಕ ಸರ್ಕಾರ. ಈ ಸರ್ಕಾರಕ್ಕೆ ಗೋವಿನ ಶಾಪ ತಟ್ಟಲಿದೆ. ಗೋವು ನರಳಾಡುವಂತೆ ಮಾಡಿದವರನ್ನು ಎನ್‌ಕೌಂಟರ್ ಮಾಡಿ ಎಂದು ಆಗ್ರಹಿಸಿದರು.