ಜಿಲ್ಲೆ

ರಸಗೊಬ್ಬರ ಪೂರೈಸದಿದ್ದರೆ ದಾವಣಗೆರೆ ಬಂದ್

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡದಿದ್ದರೆ ಭದ್ರಾ ಹೋರಾಟದ ಮಾದರಿಯಲ್ಲಿ ದಾವಣಗೆರೆ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.  ರಾಜ್ಯ ಸರ್ಕಾರ 6.30 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕಾಗಿ ಬೇಡಿಕೆ ಇಟ್ಟಿತ್ತು. ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡಿದೆ. ಆದರೂ ಕೇಂದ್ರದ ಮೇಲೆ ಗೂಬೆ ಕೂರಿಸಲಾಗುತ್ತಿದೆ. ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.  ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ಕೃಷಿ ಅಧಿಕಾರಿಗಳು ಯೂರಿಯಾ ಗೊಬ್ಬರ ದಾಸ್ತಾನು ಮಾಡಬೇಕಿತ್ತು. ಅದು ಕಾಳಸಂತೆಕೋರರ ಪಾಲಾಗಿದೆ. ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕೆ ನೀಡದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರ ಶೋಷಣೆ ನಡೆಯುತ್ತಿದೆ ಎಂದು ಹೇಳಿದರು.  ಯೂರಿಯಾ ಗೊಬ್ಬರವನ್ನು ಎಂಆರ್‌ಪಿ ದರದಲ್ಲಿ ನೀಡುವ ವ್ಯವಸ್ಥೆ ಆಗಬೇಕು. ಗೊಬ್ಬರದ ಜತೆಗೆ ಕ್ರಿಮಿನಾಶಕ, ಪೊಟ್ಯಾಶ್ ಮುಂತಾದ ಉತ್ಪನ್ನಗಳನ್ನು ಲಿಂಕ್ ಮಾಡಬಾರದು. ಇದೆಲ್ಲವನ್ನೂ ಸರಿಪಡಿಸದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದರು.  ಯೂರಿಯಾ ಬದಲು ನ್ಯಾನೋ ಗೊಬ್ಬರ ಬಳಸುವುದು ರೈತರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.  ಮುಖಂಡರಾದ ಬಿ.ಜಿ. ಅಜಯ ಕುಮಾರ್, ರಾಜು ವೀರಣ್ಣ, ಪ್ರವೀಣ್ ಜಾಧವ್, ಪಂಜು ಪೈಲ್ವಾನ್, ಚೇತನ್, ಅಜಯ ಗೌಡ್ರು ಸುದ್ದಿಗೋಷ್ಠಿಯಲ್ಲಿದ್ದರು.