ಜಿಲ್ಲೆ

ಜಾತಿಗಣತಿ ತೀರ್ಮಾನಕ್ಕೆ ರೇಣುಕಾಚಾರ್ಯ ಸ್ವಾಗತ

ರಮೇಶ ಜಹಗೀರದಾರ್

ದಾವಣಗೆರೆ : ಜನಗಣತಿಯ ಜತೆಗೆ ಜಾತಿಗಣತಿಯನ್ನೂ ಮಾಡುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಾಗತಿಸಿದ್ದಾರೆ.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿಗಣತಿ ನಡೆದಿತ್ತು. ಅದಾದ ನಂತರ ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ಜಾತಿಗಣತಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಜಾತಿಗಣತಿ ಮಾಡುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ, ರಾಜ್ಯ ಸರ್ಕಾರಕ್ಕೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಜಾತಿಗಣತಿ ಮಾಡಿಸಿದೆ. ಕಾಂತರಾಜ್ ಆಯೋಗದ ಮೂಲ ಪ್ರತಿಯೇ ಕಾಣೆಯಾಗಿದೆ. ಮೊದಲು ಅದನ್ನು ಬಿಡುಗಡೆ ಮಾಡಲಿ ಎಂದರು.  ಸಿದ್ದರಾಮಯ್ಯ ಮನೆಯಲ್ಲೇ ಜಯಪ್ರಕಾಶ್ ಹೆಗಡೆ ಅವರನ್ನು ಕೂರಿಸಿ ಯಾವುದೇ ಮನೆಗೆ ಹೋಗದೇ ಜಾತಿಗಣತಿ ವರದಿ ಸಿದ್ಧಪಡಿಸಿದ್ದಾರೆ. ಬಿಜೆಪಿ ಜಾತಿಗಣತಿ ವಿರೋಧಿಯಲ್ಲ, ಆದರೆ ಅದು ವೈಜ್ಞಾನಿಕವಾಗಿರಬೇಕು. ಜಾತಿಗಣತಿ ವರದಿಯು ಕಳೆದು ಹೋಗಿದೆಯೋ ಅಥವಾ ಇವರೇ ಬಚ್ಚಿಟ್ಟಿದ್ದಾರೋ ಗೋತ್ತಿಲ್ಲ ಎಂದು ಹೇಳಿದರು.  ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದಲ್ಲಿ ‘ಮೋದಿ ಗಾಯಬ್’ ಎಂದು ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ಪರವಾಗಿ ಇದ್ದೇವೆ ಎನ್ನುತ್ತಾರೆ. ಆದರೆ ಸಿಎಂ ಹಾಗೂ ಸಚಿವರು ಭದ್ರತಾ ವೈಫಲ್ಯ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  ಪೆಹಲ್ಗಾಮ್ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಪದಬಳಕೆ ಸರಿಯಾಗಿಲ್ಲ. ಶಬ್ದಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.