ಜಿಲ್ಲೆ

ಇಂದಿನಿಂದ ರಾಯರ ಆರಾಧನಾ ಮಹೋತ್ಸವ

ರಮೇಶ ಜಹಗೀರದಾರ್

ದಾವಣಗೆರೆ : ಶ್ರೀ ಗುರುರಾಜ ಸೇವಾ ಸಂಘದಿಂದ ನಗರದ ಕೆ.ಬಿ.ಬಡಾವಣೆ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದಿಂದ ಸೆ. 2ರ ವರೆಗೆ ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
 ಆರಾಧನಾ ದಿನಗಳಲ್ಲಿ ಪ್ರಾತಃಕಾಲ ಸುಪ್ರಭಾತ, ಫಲ ಪಂಚಾಮೃತ, ಶ್ರೀ ಹರಿವಾಯು ಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ, ಉಪನ್ಯಾಸ, ಮಹಾನೈವೇದ್ಯ, ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
 ಸಂಜೆ ದೀವುಟಗಿ ಸೇವೆ, ಪ್ರಾಕಾರ ರಥೋತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಲಿವೆ.
 ಗುರುವಾರ ಶ್ರೀ ಗುರುರಾಯರ ಪೂರ್ವಾರಾಧನೆ ನಡೆಯಲಿದ್ದು ಸಂಜೆ 7 ಗಂಟೆಗೆ ನಮನ ಅಕಾಡೆಮಿಯ ಡಿ.ಕೆ.ಮಾಧವಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
 ಸೆ. 1ರಂದು ಶ್ರೀ ಗುರುರಾಯರ ಮಧ್ಯಾರಾಧನೆ ಜರುಗಲಿದ್ದು ಸಂಜೆ 6 ಗಂಟೆಗೆ ರಥೋತ್ಸವ, ಅಷ್ಟಾವಧಾನ, 7 ಗಂಟೆಯಿಂದ  ರಾಜಗೋಪಾಲ್ ಭಾಗವತರ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
 ಸೆ.2 ರಂದು ಶ್ರೀ ಗುರುರಾಯರ ಉತ್ತರಾರಾಧನೆ ಪ್ರಯುಕ್ತ ಬೆಳಗ್ಗೆ 10.30 ರಿಂದ ರಾಜಬೀದಿಗಳಲ್ಲಿ ವೇದ, ವಾದ್ಯ, ಭಜನೆ, ನಾದಸ್ವರ, ಶ್ರೀಮನ್ಯಾಯ ಸುಧಾಪರಿಮಳ ಗ್ರಂಥದೊಂದಿಗೆ ಶ್ರೀಗುರು ಸಾರ್ವಭೌಮರ ವೈಭವೋಪೇತ ಮಹಾರಥೋತ್ಸವ ಜರುಗಲಿದೆ. ಸಂಜೆ 6ರಿಂದ ವಿಶ್ವಂಭರ ಆರ್. ಭಾಗವತ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.