ದಾವಣಗೆರೆ : ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ದಾವಣಗೆರೆ ಶಾಖೆ ವತಿಯಿಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 63ನೇ ರಥೋತ್ಸವ ಹಾಗೂ ಲಿಂ. ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 23ನೇ ಸಂಸ್ಮರಣೋತ್ಸವವನ್ನು ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಡಿ. ಬಸವರಾಜ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ನಗರದ ಭೋವಿ ಕಾಲನಿಯ ಸಿದ್ಧರಾಮೇಶ್ವರ ದೇವಸ್ಥಾನದಿಂದ ರಥೋತ್ಸವ ಆರಂಭವಾಗಲಿದೆ ಎಂದು ತಿಳಿಸಿದರು. ಮಾಗಾನಹಳ್ಳಿ ರಸ್ತೆ, ಕೆ.ಆರ್. ರಸ್ತೆ, ಮುನ್ಸಿಪಲ್ ಕಾಲೇಜು ಬಳಿಯಿಂದ ಕೆ.ಆರ್. ಮಾರುಕಟ್ಟೆ, ಮಂಡಿಪೇಟೆ, ವಿಜಯಲಕ್ಷ್ಮೀ ರಸ್ತೆ, ಚೌಕಿಪೇಟೆ, ಹಾಸಭಾವಿ ವೃತ್ತದ ಮೂಲಕ ಮರಳಿ ದೇವಸ್ಥಾನಕ್ಕೆ ಬರಲಾಗುವುದು ಎಂದು ಮಾಹಿತಿ ನೀಡಿದರು. ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ನಾಡಿನ ವಿವಿಧ ಮಠಾಧೀಶರು, ಸಚಿವರಾದ ಶಿವರಾಜ ತಂಗಡಗಿ, ಎಸ್.ಎಸ್. ಮಲ್ಲಿಕಾರ್ಜುನ್, ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಇನ್ನಿತರ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸಿದ್ಧರಾಮೇಶ್ವರ ದೇವರ ರಥೋತ್ಸವವನ್ನು 1962 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರಾವಣ ಮಾಸದ ಮೊದಲ ಸೋಮವಾರ ರಥೋತ್ಸವ ನಡೆಸುವ ಸಂಪ್ರದಾಯವಿದೆ ಎಂದರು. ಸಮಾಜದ ಮುಖಂಡರಾದ ಎಚ್. ಜಯಣ್ಣ, ಎಚ್. ವೆಂಕಟೇಶ್, ಎಚ್. ಮಂಜುನಾಥ್, ಬಿ.ಟಿ. ಸಿದ್ದಪ್ಪ, ಎಚ್. ಚಂದ್ರಪ್ಪ, ವಿ. ಗೋಪಾಲರಾವ್, ಎ.ವಿ. ನಾಗರಾಜ, ಡಿ. ಶಿವಕುಮಾರ್, ದೊರೈರಾಜ್ ಸುದ್ದಿಗೋಷ್ಠಿಯಲ್ಲಿದ್ದರು.