ಜಿಲ್ಲೆ

ವಿಜೃಂಭಣೆಯ ಶ್ರೀ ಲಿಂಗೇಶ್ವರ ಸ್ವಾಮಿ ರಥೋತ್ಸವ

ರಮೇಶ ಜಹಗೀರದಾರ್

ದಾವಣಗೆರೆ : ಗೀತಾಂಜಲಿ ಚಿತ್ರಮಂದಿರ ಸಮೀಪದ ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ಸ್ವಾಮಿಯ ರಥೋತ್ಸವ  ವಿಜೃಂಭಣೆಯಿಂದ ಜರುಗಿತು.  ಭಾದ್ರಪದ ಶುದ್ಧ ಪಾಡ್ಯ ಬೆಳಗ್ಗೆ ದೇವಾಲಯದಲ್ಲಿ ವಿವಿಧ ಪತ್ರೆ ಪುಷ್ಪಗಳಿಂದ ಅಲಂಕೃ  ಮೂರ್ತಿಗೆ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.  ದೇವಸ್ಥಾನದಿಂದ ಮಂಗಳವಾದ್ಯ ಮೇಳದೊಂದಿಗೆ ಹೊರಟ ರಥವು ಗಾಂಧಿ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ ಹಾಗೂ ಪಿ.ಬಿ.ರಸ್ತೆ ಮೂಲಕ ಸಾಗಿತು.  ದಾರಿಯುದ್ದಕ್ಕೂ  ಭಕ್ತರು ಹಣ್ಣು-ಕಾಯಿ ಸಮರ್ಪಿಸಿ ಭಕ್ತಿ ನಮನ ಸಲ್ಲಿಸಿದರು. ಸಮಾಳ, ಡೊಳ್ಳು, ಡ್ರಮ್‌ಸೆಟ್, ಕೀಲುಕುದುರೆ ಮೊದಲಾದ ವಾದ್ಯಮೇಳಗಳು ಉತ್ಸವಕ್ಕೆ ಮೆರುಗು ನೀಡಿದವು.  ರಥೋತ್ಸವದ ಪ್ರಯುಕ್ತ ಬ್ರಾಹ್ಮಿ ಮುಹೂರ್ತದಲ್ಲಿ  ಲಿಂಗೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಭಕ್ತರು ಸ್ವಾಮಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.  ಮಹಾಂತ ರುದ್ರೇಶ್ವರ ಶ್ರೀ, ಲಿಂಗೇಶ್ವರ ದೇವಸ್ಥಾನ ದೇವಸ್ಥಾನ ಸಂಘದ ಅಧ್ಯಕ್ಷ ಅಜ್ಜಂಪುರ ಶೆಟ್ರು ಮಂಜುನಾಥ, ಉಪಾಧ್ಯಕ್ಷ ಕಿರುವಾಡಿ ಸೋಮಶೇಖರ್, ಕಿರುವಾಡಿ ಚಂದ್ರಶೇಖರ್, ಕರೇಸಿದ್ದಪ್ಳರ ಸಿದ್ದಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಇತರರು ಭಾಗವಹಿಸಿದ್ದರು.