ಜಿಲ್ಲೆ

ಅಪ್ಪಟ ಗ್ರಾಮೀಣ ಪ್ರತಿಭೆ

ರಮೇಶ ಜಹಗೀರದಾರ್

ದಾವಣಗೆರೆ :  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 595 ಅಂಕ ಪಡೆಯುವ ಮೂಲಕ ಜಿಲ್ಲೆಯ ಎರಡನೇ ಟಾಪರ್‌ಗಳಲ್ಲಿ ಒಬ್ಬರಾಗಿರುವ ನಗರದ ಸಿದ್ಧಗಂಗಾ ಪಿಯು ಕಾಲೇಜಿನ ವಿದ್ಯಾರ್ಥಿ ಎನ್. ರವಿಕಿರಣ್ ಅಪ್ಪಟ ಗ್ರಾಮೀಣ ಪ್ರತಿಭೆ.  ಚಿತ್ರದುರ್ಗ ತಾಲೂಕು ಉಪ್ಪನಾಯಕನಹಳ್ಳಿ ಗ್ರಾಮದ ಕೃಷಿ ಹಿನ್ನೆಲೆಯ ಕುಟುಂಬ. ತಂದೆ ಎಸ್. ನಾಗರಾಜ ರೈತರು. ತಾಯಿ ಎಸ್. ಸಿದ್ದಮ್ಮ ಆಶಾ ಕಾರ್ಯಕರ್ತೆ.  ಹೊಳಲ್ಕೆರೆ ತಾಲೂಕು ಹನುಮಂತ ದೇವರ ಕಣಿವೆ ಮುರಾರ್ಜಿ ವಸತಿ ಶಾಲೆಯಲ್ಲಿ ಶಾಲಾ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 98.88 ಫಲಿತಾಂಶ ಪಡೆದಿದ್ದ ರವಿಕಿರಣ್‌ಗೆ ಸಿದ್ಧಗಂಗಾ ಪಿಯು ಕಾಲೇಜಿನಲ್ಲಿ ಉಚಿತ ಸೀಟ್ ಸಿಕ್ಕಿತ್ತು.  ನಮ್ಮ ತಂದೆಗೆ ನಾನು ಡಾಕ್ಟರ್ ಆಗಬೇಕು ಎಂಬ ಆಸೆ. ಆದರೆ ನನಗೆ ಐ.ಎ.ಎಸ್ ಅಧಿಕಾರಿ ಆಗಬೇಕೆಂಬ ಹಂಬಲ. ಮೊದಲು ಎಂಬಿಬಿಎಸ್ ಮಾಡಿ ನಂತರ ಯುಪಿಎಸ್ಸಿ ಪರೀಕ್ಷೆ ಬರೆಯುವ ಗುರಿ ಇಟ್ಟುಕೊಂಡಿದ್ದೇನೆ ಎಂದು ರವಿಕಿರಣ್ ತಿಳಿಸಿದರು.