ದಾವಣಗೆರೆ : ಪ್ರಧಾನ ಮಂತ್ರಿ ಸ್ವನಿಧಿ ಮತ್ತು ವಿಶ್ವಕರ್ಮ ಯೋಜನೆಗಳು ಅಸಂಘಟಿತ ವಲಯದ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು ಹೆಚ್ಚು ಫಲಾನುಭವಿಗಳು ಇವುಗಳ ಪ್ರಯೋಜನ ಪಡೆಯಬೇಕು ಎಂದು, ಎರಡೂ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಬಿಜೆಪಿಯ ರಾಜ್ಯ ಸಂಚಾಲಕ, ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಯೋಜನೆಯಡಿ ಇದುವರೆಗೆ 1.70 ಲಕ್ಷ ಜನ, ಪ್ರಧಾನ ಮಂತ್ರಿ ಸ್ವನಿಧಿ ಅಡಿಯಲ್ಲಿ 7.36 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದರು.
ಈ ವಿಚಾರವಾಗಿ ಜನರಲ್ಲಿ ಅರಿವು ಮೂಡಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು. ಮತ್ತೊಮ್ಮೆ ಸಮೀಕ್ಷೆ ನಡೆಸಿ, ಬಿಟ್ಟು ಹೋದವರನ್ನು ಯೋಜನೆಯಡಿ ಸೇರಿಸಲು ಅವಕಾಶವಿದೆ ಎಂದು ತಿಳಿಸಿದರು.
ಪತ್ರಿಕಾ ವಿತರಕರು, ಹಾಲು ಹಾಕುವವರು, ಕೇಟರಿಂಗ್ ಮಾಡುವವರು, ಬಟ್ಟೆ ಇಸ್ತ್ರಿ ಮಾಡುವವರು ಇನ್ನಿತರ ದುಡಿಯುವ ವರ್ಗದವರು ಸ್ವನಿಧಿ ಯೋಜನೆಯಡಿ ಬರುತ್ತಾರೆ ಎಂದು ಮಾಹಿತಿ ನೀಡಿದರು.
ವಿಶ್ವಕರ್ಮ ಯೋಜನೆಯಡಿ 18 ವೃತ್ತಿಗಳಲ್ಲಿ ತೊಡಗಿರುವ ಕಾಯಕ ಜೀವಿಗಳಿಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತಿದ್ದು ಅವುಗಳಲ್ಲಿ ದಾವಣಗೆರೆಯೂ ಒಂದಾಗಿದೆ ಎಂದು ತಿಳಿಸಿದರು.
ಮರದ ಕೆಲಸ, ಕಬ್ಬಿಣದ ಕೆಲಸ ಮಾಡುವವರು, ಮಡಕೆ, ಚಿನ್ನದ ಕೆಲಸ, ದೋಣಿ ಕಟ್ಟುವವರು, ಹೂವು ಕಟ್ಟುವವರು, ಗೋಣಿಚೀಲ ಹೊಲಿಯುವವರು, ಸವಿತಾ ಸಮಾಜದವರು, ಟೈಲರ್‌ಗಳು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದರು.
ಫಲಾನುಭವಿಗಳು ನಾಗರಿಕ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಯೋಜನೆಗಾಗಿ ಕೇಂದ್ರ ಸರ್ಕಾರ 13 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿದೆ ಎಂದು ಹೇಳಿದರು.
ಈ ಯೋಜನೆಯ ಪ್ರಯೋಜನ ಪಡೆಯುವವರಿಗೆ 7 ದಿನಗಳ ತರಬೇತಿ ನೀಡಲಾಗುವುದು. ಆ ಅವಧಿಯಲ್ಲಿ ಪ್ರತಿ ದಿನ 500 ರೂ.ಗಳ ಸ್ಟೈಪಂಡ್ ಸಿಗಲಿದೆ. ಆಸಕ್ತರು 15 ದಿನಗಳ ವಿಶೇಷ ತರಬೇತಿಯನ್ನೂ ಪಡೆಯಬಹುದು. ಅವರಿಗೆ ಪ್ರಮಾಣಪತ್ರ, ಗುರುತಿನ ಚೀಟಿ ನೀಡಲಾಗುವುದು. ಸಾಲದ ಮೊತ್ತಕ್ಕೆ ಶೇ. 8 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರವೇ ಪಾವತಿಸಲಿದೆ. ಅವರ ಉತ್ಪನ್ನಗಳ ಮಾರುಕಟ್ಟೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 43.86 ಲಕ್ಷ ಜನರು ನೋಂದಾಯಿಸಿಕೊಂಡಿದ್ದು ಶೇ. 89 ರಷ್ಟು ಮರುಪಾವತಿ ಆಗುತ್ತಿದೆ. ಬ್ಯಾಂಕುಗಳಲ್ಲಿ ವಾರಕ್ಕೊಮ್ಮೆ ಸಾಲ ಮೇಳ ನಡೆಯುತ್ತಿವೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಪ್ರೊ. ಲಿಂಗಣ್ಣ, ಪಕ್ಷದ ಮುಖಂಡರಾದ ಯಶವಂತರಾವ್ ಜಾಧವ್, ಶಿವಕುಮಾರ್, ಲೋಕಿಕೆರೆ ನಾಗರಾಜ, ಬಿ.ಎಂ. ಸತೀಶ್, ಸೊಕ್ಕೆ ನಾಗರಾಜ, ಬಿ.ಎಸ್. ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.