ದಾವಣಗೆರೆ : ‘ಕರ್ನಾಟಕ’ ಎಂದು ಮರು ನಾಮಕರಣಗೊಂಡು 50 ವರ್ಷಗಳಾಗಿರುವ ಹೊತ್ತಿನಲ್ಲಿ ನಾಡಿನ ಭವ್ಯ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಯುವ ಜನತೆಗೆ ಮನನ ಮಾಡಿಕೊಡುವುದು ಇಂದಿನ ಅತ್ಯಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಕ್ರಿ.ಪೂ. 3ನೇ ಶತಮಾನದ ಸಾಮ್ರಾಟ ಅಶೋಕನ ಶಿಲಾ ಶಾಸನಗಳಲ್ಲಿ, ಶಾತವಾಹನರ ಆಳ್ವಿಕೆಯ ಕಾಲದಲ್ಲಿಯೂ ಕನ್ನಡ ಭಾಷೆಯ ಬಳಕೆಯನ್ನು ಕಾಣಬಹುದು ಎಂದು ಹೇಳಿದರು.
ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗೆ ನೈತಿಕ ಶಕ್ತಿಯನ್ನು ತುಂಬಿ ಕರ್ತವ್ಯ ನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ. ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗವಕಾಶಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸುವರ್ಣ ಕರ್ನಾಟಕ ಸಂಭ್ರಮದ ಈ ಸಂದರ್ಭದಲ್ಲಿ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದು, ಕೀಳರಿಮೆಯನ್ನು ಬಿಟ್ಟು ಎಲ್ಲರೂ ಒಂದಾಗಿ ಭವ್ಯ ಕರ್ನಾಟಕದ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಪಾಲಿಕೆ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಪೂರ್ವ ವಲಯದ ಐಜಿಪಿ ಕೆ. ತ್ಯಾಗರಾಜನ್, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಇಟ್ನಾಳ್ ಇದ್ದರು.
ನಗರದ ಗೋಲ್ಡನ್ ಪಬ್ಲಿಕ್ ಶಾಲೆಯ ಮಕ್ಕಳು ‘ರೋಮಾಂಚನವೀ ಕನ್ನಡ’ ಎಂಬ ನೃತ್ಯರೂಪಕವನ್ನು ಪ್ರದರ್ಶಿಸಿದರು. ಬಾಪೂಜಿ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ನಂದಿಕೋಲು ನೃತ್ಯದ ಮೂಲಕ ಗಮನ ಸೆಳೆದರು. ಸೇಂಟ್ ಜಾನ್ಸ್ ಶಾಲೆಯ ಮಕ್ಕಳು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿದರು. ಆಕರ್ಷಕ ಪಥ ಸಂಚಲನದಲ್ಲಿ 14 ತಂಡಗಳು ಶಿಸ್ತಿನಿಂದ ಪಾಲ್ಗೊಂಡವು.
ಬೆಳಗ್ಗೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಕನ್ನಡತಾಯಿ ಭುವನೇಶ್ವರಿ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಇದ್ದರು.
...
* ಸಾಧಕರಿಗೆ ಸನ್ಮಾನ
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ 50 ಸಾಧಕರನ್ನು ಸನ್ಮಾನಿಸಲಾಯಿತು.
ಕೃಷ್ಣಪ್ಪ (ಮಂಗಳವಾದ್ಯ), ಬಸವರಾಜಪ್ಪ ಛಲವಾದಿ (ಶಹನಾಯಿ), ಕೆ. ರೇವಣಪ್ಪ (ಜಾನಪದ ಭಜನೆ), ಜಿ. ಮಂಜಮ್ಮ (ರಂಗಭೂಮಿ), ಎಚ್.ಕೆ. ಕೊಟ್ರಪ್ಪ (ಸಾಹಿತ್ಯ), ಮುರುಗೇಶಪ್ಪ (ತೋಟಗಾರಿಕೆ), ಕೆ. ಬಸವರಾಜಪ್ಪ (ಜಾನಪದ ಭಜನೆ), ಹನುಮಂತ ರಾವ್ ಪವಾರ್ (ರಂಗಭೂಮಿ), ದೇವಪ್ಪ ಮಲಹಾಳ (ತತ್ವಪದ ಜಾನಪದ ಸಂಗೀತ).
ಹಳೆಬೀಡು ರಾಮಪ್ರಸಾದ್ (ಕನ್ನಡಪರ ಹೋರಾಟ), ವಿಜಯಾ ಸಿ. ಅಕ್ಕಿ (ಸಮಾಜ ಸೇವೆ), ಬಿ. ಪರಮೇಶ್ವರಚಾರ್ (ಸಂಗೀತ), ಡಾ.ಶಿವನಗೌಡ (ಸಾಹಿತ್ಯ), ಪಾಪಮ್ಮ (ಸೋಬಾನೆ), ವಿಜಯಲಕ್ಷ್ಮೀ (ರಂಗಭೂಮಿ), ಡಾ. ಬಿ.ಎ. ರಾಜಪ್ಪ ನಿಬಗೂರು (ಸಾಹಿತ್ಯ), ಎಂ.ಬಿ. ನಾಗರಾಜ್ (ರಂಗ ಕಲಾವಿದ).
ರವೀಂದ್ರ ಕಮ್ಮಾರ್ (ಚಿತ್ರಕಲೆ), ಜೆ.ಎನ್. ಕರಿಬಸಪ್ಪ (ಸಮಾಜ ಸೇವೆ), ಶಾಂತಾದೇವಿ ಹಿರೇಕಲ್ಮಠ (ಸಂಗೀತ), ವೀಣಾ ಕೃಷ್ಣಮೂರ್ತಿ (ಸಾಹಿತ್ಯ), ಎಂ.ರವಿ (ಕನ್ನಡ ಪರ ಹೋರಾಟ), ಗೀತಾ ಎಸ್.ಪಿ. (ಯೋಗ), ನಿರಂಜನ ಮೂರ್ತಿ (ಸಮಾಜ ಸೇವೆ), ವೀರೇಶ್ ಪ್ರಸಾದ್ (ಪತ್ರಿಕೋದ್ಯಮ), ಚಂದ್ರಪ್ಪ ಒ. (ರಂಗಭೂಮಿ), ಹನುಮಂತಾಚಾರಿ (ವೀರಗಾಸೆ).
ಬಿ.ಎಂ. ಶಿವಕುಮಾರ್ (ಪತ್ರಿಕೋದ್ಯಮ), ಬಸವರಾಜ ಎಚ್.ಬಿ. (ಕೀಲು ಕುದುರೆ), ಚಂದ್ರು (ತಬಲಾ ವಾದನ), ತಿಪ್ಪೇಸ್ವಾಮಿ ಜಿ.ಎಸ್. (ಸಾವಯವ ಕೃಷಿ), ರಂಗನಾಥ್ ರಾವ್ (ಪತ್ರಿಕೋದ್ಯಮ), ಫಕ್ರುದ್ದೀನ್ (ಪತ್ರಿಕೋದ್ಯಮ), ಹನುಮಂತಪ್ಪ ಕೊಕ್ಕನೂರು (ತಮಟೆ), ಸುರೇಶ್ ಚೇಕೂರಿ (ಕೃಷಿ ಯಾಂತ್ರೀಕರಣ), ಗಂಗಾಧರ ಬಿ.ಎಲ್. ನಿಟ್ಟೂರ್ (ಸಾಹಿತ್ಯ), ಸಿ.ಎಂ. ನರೇಂದ್ರ (ಸಂಗೀತ), ದೀಪಾ ಎನ್. ರಾವ್ (ಶಾಸ್ತ್ರೀಯ ಸಂಗೀತ).
ಕರಿಬಸಪ್ಪ ಜಿ. (ಕ್ರೀಡೆ), ಚಂದ್ರು ಎಚ್. (ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ, ಟಿ.ಕೆ. ದಿನೇಶ್ ಬಾಬು (ಪತ್ರಿಕಾರಂಗ), ಡಾ.ವರದರಾಜ್ (ಪತ್ರಿಕೋದ್ಯಮ), ರವಿಕುಮಾರ್ ಆರ್. (ಕನ್ನಡಪರ ಹೋರಾಟ), ಕೆ. ಬಾನಪ್ಪ (ನಾಟಕ), ವಸಂತಕುಮಾರ್ (ಪತ್ರಿಕೋದ್ಯಮ), ಎಚ್.ಎನ್. ಪ್ರಕಾಶ್ (ಪತ್ರಿಕೋದ್ಯಮ), ವಿಜಯಕುಮಾರಿ.ಕೆ (ಸಮಾಜಸೇವೆ), ಈಶ್ವರಪ್ಪ (ತೋಟಗಾರಿಕೆ), ಅಲ್ಲಮಪ್ರಭು ಸ್ವಾಮಿ ಎಚ್.ಬಿ. (ಸಾವಯವ ಕೃಷಿ).
...