ದಾವಣಗೆರೆ: ಮಳೆ ಬರಲೇ ಇಲ್ಲ ಎಂದು ನಿರಾಶರಾಗಿದ್ದ ಜಿಲ್ಲೆಯ ರೈತರಿಗೆ ಗುರುವಾರ ಸುರಿದ ಮಳೆ ಆಶಾದಾಯಕವಾಗಿತ್ತು. ವಾತಾವರಣಕ್ಕೆ ತಂಪೆರೆಯುವ ಜತೆಗೆ ಬಿತ್ತನೆಗೆ ಅನುಕೂಲಕರವಾಗಿ ಪರಿಣಮಿಸಿದೆ.
ನಗರದಲ್ಲಿ ಮಧ್ಯಾಹ್ನ 12.30ಕ್ಕೆ ಮಳೆ ಆರಂಭವಾಯಿತು. ನಂತರ ಸ್ವಲ್ಪ ಬಿಡುವು ಕೊಟ್ಟು ಸಂಜೆಯವೆರೆಗೆ ಬಿಟ್ಟೂ ಬಿಟ್ಟು ಸುರಿಯಿತು. ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಯಲ್ಲಿ ನೀರು ಹರಿಯಿತು. ಇದರಿಂದ ವಾಹನ ಸವಾರರು ಪರದಾಡಿದರು. ವಿದ್ಯಾರ್ಥಿ ಭವನ, ಈರುಳ್ಳಿ ಮಾರುಕಟ್ಟೆ, ಎಪಿಎಂಸಿ, ಬಾಡಾ ಕ್ರಾಸ್, ಶಾಮನೂರು ಭಾಗದಲ್ಲಿ ಮಳೆಯಿಂದಾಗಿ ಚರಂಡಿಗಳಿಂದ ನೀರು ಉಕ್ಕಿ ಹರಿಯಿತು.
ಮನೆಯಿಂದ ಹೊರ ಬೀಳುವಾಗ ಜನರು ಕೊಡೆಗಳ ಮೊರೆ ಹೋದರು. ಜರ್ಕಿನ್‌ಗಳನ್ನು ಧರಿಸಿದರು. ಮತ್ತೆ ಕೆಲವರು ಪ್ಲಾಸ್ಟಿಕ್ ಕವರ್ ತಲೆಯ ಮೇಲೆ ಹಾಕಿಕೊಂಡು ಮಳೆಯಿಂದ ರಕ್ಷಣೆ ಪಡೆದರು. ಆದರೆ ಮಕ್ಕಳು ಮಾತ್ರ ಮಳೆಯಲ್ಲಿ ನೆನೆದು ಖುಷಿಪಟ್ಟರು.
ಈ ಮಳೆಯಿಂದ ಬಿತ್ತನೆಗೆ ಅನುಕೂಲಕರವಾಗಿದೆ. ರೈತರು ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದರು.