ಜಿಲ್ಲೆ

ಜಿಲ್ಲೆಯಲ್ಲಿ ಮೊದಲ ಮಳೆಯ ಹಿತಾನುಭವ

ದಾವಣಗೆರೆ : ಜಿಲ್ಲೆಯಲ್ಲಿ ಮಂಗಳವಾರ ಬಿದ್ದ ಈ ಹಂಗಾಮಿನ ಮೊದಲ ಮಳೆಯ ಹನಿಗಳು ಬಿಸಿಲಿನ ತಾಪದಿಂದ ಬಳಲಿದ್ದ ಜನರಿಗೆ ತಂಪೆರೆದವು.  ದಾವಣಗೆರೆ, ಹರಿಹರ ಸೇರಿದಂತೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ಗುಡುಗು, ಮಿಂಚಿನ ಆರ್ಭಟವೂ ಇತ್ತು. ಕೊನೆಗೂ ವರುಣ ಸಿಂಚನವಾದಾಗ ಹಿತಾನುಭವ ನೀಡಿತು.  ದಾವಣಗೆರೆ ನಗರದಲ್ಲೂ ಮಳೆ ಹನಿಗಳು ಮುದ ನೀಡಿದವು. ಮಧ್ಯಾಹ್ನದ ನಂತರ ಮೋಡ ಮುಸುಕಿದಾಗಲೇ ಮಳೆ ಬರುವ ಸೂಚನೆ ಸಿಕ್ಕಿತ್ತು. ಆಗಾಗ ಗಾಳಿ ಬೀಸುತ್ತಿತ್ತು. ಸಂಜೆ ಹೊತ್ತಿಗೆ ಮಳೆ ಹನಿಗಳು ಭೂಸ್ಪರ್ಶ ಮಾಡಿದವು.  ಫೆಬ್ರವರಿ ತಿಂಗಳಿಂದಲೇ ಬಿಸಿಲು, ಸೆಕೆಯನ್ನು ಅನುಭವಿಸುತ್ತ ಬಂದಿದ್ದ ಸಾರ್ವಜನಿಕರು ಬದಲಾದ ವಾತಾವರಣ ಕಂಡು ಪುಳಕಿತಗೊಂಡರು. ರಸ್ತೆ ಮೇಲೆ ಹರಿದ ಅಲ್ಪಸ್ವಲ್ಪ ನೀರಿನಲ್ಲೇ ಕಾಗದದ ದೋಣಿಗಳನ್ನು ತೇಲಿ ಬಿಟ್ಟರು ಚಿಣ್ಣರು ಸಂಭ್ರಮಿಸಿದರು. ಮೊದಲ ಮಳೆಯ ಹನಿಗಳಿಗೆ ಕೈಯೊಡ್ಡಿ ಯುವತಿಯರು ಸಂಭ್ರಮಿಸುವ ದೃಶ್ಯ ಕಂಡುಬಂದಿತು. ವಾಹನ ಸವಾರರು ಮಳೆ ಹನಿಗಳನ್ನು ಆನಂದಿಸುತ್ತ ಸಾಗಿದರು.