ಜಿಲ್ಲೆ

ದಾವಣಗೆರೆ ಜಿಲ್ಲೆಯಲ್ಲಿ 11.4 ಮಿ.ಮೀ. ಮಳೆ, 6.38 ಲಕ್ಷ ರೂ. ನಷ್ಟ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯಲ್ಲಿ 11.4 ಮಿ.ಮೀ. ಸರಾಸರಿ ಮಳೆಯಾಗಿದೆ. 16 ಮನೆ ಹಾಗೂ 2 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದ್ದು ಒಟ್ಟು 6.38 ಲಕ್ಷ ರೂ. ನಷ್ಟ ಸಂಭವಿಸಿದೆ.
 ನ್ಯಾಮತಿ ತಾಲೂಕಿನಲ್ಲಿ ಅತಿಹೆಚ್ಚು 20.4 ಮಿ.ಮೀ. ಮಳೆಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 14.8 ಮಿ.ಮೀ, ಜಗಳೂರು 12.7 ಮಿ.ಮೀ, ಹೊನ್ನಾಳಿ 10.8 ಮಿ.ಮೀ, ದಾವಣಗೆರೆ 6 ಮಿ.ಮೀ, ಹರಿಹರ ತಾಲೂಕಿನಲ್ಲಿ 4.4 ಮಿ.ಮೀ. ಮಳೆಯಾಗಿದೆ.
 ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ಹಾನಿ ಮುಂದುವರಿದಿದೆ. ತೇವಾಂಶದಿಂದ ಶಿಥಿಲಗೊಂಡ ಗೋಡೆಗಳು ಕುಸಿದು ನಷ್ಟ ಸಂಭವಿಸುತ್ತಿದೆ. ಹರಿಹರ ತಾಲೂಕಿನಲ್ಲಿ 2 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.
 ಜಿಲ್ಲಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿದ್ದು ಶೀತದ ವಾತಾವರಣವಿದೆ. ರೇನ್ ಕೋಟ್ ಅಥವಾ ಕೊಡೆಗಳ ನೆರವಿಲ್ಲದೆ ಹೊರಗೆ ಹೋಗುವ ಪರಿಸ್ಥಿತಿ ಇಲ್ಲ. ಕೆಲವರು ಸ್ವೆಟರ್‌ಗಳ ಮೊರೆ ಹೋಗಿದ್ದಾರೆ. ಕಿವಿ ಮತ್ತು ತಲೆಗೆ ಬಟ್ಟೆ ಕಟ್ಟಿಕೊಂಡು ಮಳೆಯಿಂದ ರಕ್ಷಣೆ ಪಡೆಯುವ ದೃಶ್ಯ ಕಂಡುಬರುತ್ತಿದೆ. ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ನೀರು ನಿಂತು ಗುಂಡಿಗಳು ಮೈದುಂಬಿಕೊಂಡಿವೆ.