ಜಿಲ್ಲೆ

ಜಿಲ್ಲಾದ್ಯಂತ ಮಳೆ ಸೃಷ್ಟಿಸಿದ ಅವಾಂತರ

ರಮೇಶ ಜಹಗೀರದಾರ್

ದಾವಣಗೆರೆ :  ಜಿಲ್ಲಾದ್ಯಂತ ಬುಧವಾರ ರಾತ್ರಿಯಿಂದ ವ್ಯಾಪಕ ಮಳೆಯಾಗಿದ್ದು ಅವಾಂತರ ಸೃಷ್ಟಿಸಿದೆ. ಹರಿಹರದ ಜೈಭೀಮ್ ನಗರದ ಮನೆಯೊಂದರ ಗೋಡೆ ಕುಸಿದು ಆಯಿಷಾ ಎಂಬ 3 ವರ್ಷದ ಮಗು ಗಾಯಗೊಂಡಿದೆ. ಅಡಕೆ, ಈರುಳ್ಳಿ ಇನ್ನಿತರ ಬೆಳೆಗಳು ಜಲಾವೃತಗೊಂಡಿದ್ದು ದಾವಣಗೆರೆ ನಗರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿತ್ತು.  ಜಿಲ್ಲೆಯಲ್ಲಿ 33.7 ಮಿ.ಮೀ. ಮಳೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 59 ಮಿ.ಮೀ. ಮಳೆಯಾಗಿದ್ದು ಕೆರೆಯಾಗಳಹಳ್ಳಿ ಗ್ರಾಮದಲ್ಲಿ 1.14 ಎಕರೆ ಈರುಳ್ಳಿ ಬೆಳೆ ಹಾಗೂ ಒಟ್ಟು 24 ಮನೆಗಳಿಗೆ ಹಾನಿಯಾಗಿ 11.53 ಲಕ್ಷ ರೂ. ನಷ್ಟ ಸಂಭವಿಸಿದೆ.  ಹರಿಹರ ತಾಲೂಕಿನಲ್ಲಿ 40.3 ಮಿ.ಮೀ, ಜಗಳೂರು 39.8 ಮಿ.ಮೀ, ಚನ್ನಗಿರಿ 20.1 ಮಿ.ಮೀ, ಹೊನ್ನಾಳಿ 13.3 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 15.5 ಮಿ.ಮೀ. ಮಳೆಯಾಗಿದೆ.  ನೇರ್ಲಿಗೆ, ಗುಡಾಳು, ಗುಮ್ಮನೂರು, ಕಂದನಕೋವಿ, ಹೆಬ್ಬಾಳು, ಮಾಯಕೊಂಡ ಹೋಬಳಿಯ ಅಣ್ಣಾಪುರ, ದಿಂಡದಹಳ್ಳಿ, ಹುಚ್ಚವನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಅಡಕೆ ತೋಟಗಳಲ್ಲಿ ನೀರು ನಿಂತಿತ್ತು.  ನಗರದ ಪಿಜೆ ಬಡಾವಣೆಯ ಪಿಸಾಳೆ ಕಾಂಪೌಂಡ್‌ನ 3ನೇ ಕ್ರಾಸ್‌ನಲ್ಲಿ ಚರಂಡಿ ಕಟ್ಟಿಕೊಂಡು ನೀರು ಹಲವು ಮನೆಗಳಿಗೆ ನುಗ್ಗಿತ್ತು. ಅಲ್ಲಿನ ನಿವಾಸಿಗಳು ನೀರನ್ನು ಹೊರ ಹಾಕಲು ಪ್ರಯಾಸಪಡಬೇಕಾಯಿತು. ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮಳೆ ನೀರಲ್ಲಿ ಅರ್ಧ ಮುಳುಗಡೆಯಾಗಿದ್ದವು. ಗಾಂಧಿನಗರ, ಆಜಾದ್ ನಗರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿತ್ತು.  ಮಂಡಕ್ಕಿ ಭಟ್ಟಿ ಪ್ರದೇಶದ ಬಳಿ ಹರಿಯುವ ಹಳ್ಳದ ಸೇತುವೆ ಮೇಲೆ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಎಸ್‌ಎಸ್ ಲೇಔಟ್, ಆವರಗೆರೆ, ಪುನೀತ್ ರಾಜಕುಮಾರ್ ಬಡಾವಣೆ, ಮಂಡಕ್ಕಿಭಟ್ಟಿ ಪ್ರದೇಶಗಳಲ್ಲಿ ಮಳೆನೀರು ಚರಂಡಿ ಕಟ್ಟಿಕೊಂಡು ಜಲಾವೃತವಾಗಿತ್ತು. ಮಹಾನಗರ ಪಾಲಿಕೆಯ ಸಿಬ್ಬಂದಿ ಜೆಸಿಬಿಗಳ ಸಹಾಯದಿಂದ ಸಮಸ್ಯೆ ಪರಿಹರಿಸಿದರು. ಯರಗುಂಟೆ, ಗಾಂಧಿನಗರ, ನಿಟ್ಟುವಳ್ಳಿ, ಶಾಮನೂರಿನಲ್ಲಿ ಕೆಲವು ಮನೆಗಳು ಬಿದ್ದಿವೆ.  ಭಾರೀ ಮಳೆಯಿಂದಾಗಿ ನಗರದ ಹಳೇ ಕುಂದುವಾಡ ರಸ್ತೆಯು ನದಿಯಂತಾಗಿತ್ತು. ಜಲಾವೃತವಾಗಿದ್ದ ರಸ್ತೆಯನ್ನು ದಾಟುತ್ತಿದ್ದಾಗ ಬಿದ್ದ ಬೈಕ್ ಸವಾರನನ್ನು ಅಲ್ಲಿನ ನಿವಾಸಿಗಳು ರಕ್ಷಿಸಿದರು.  ...    (ಬಾಕ್ಸ್)  ಸೂಕ್ತ ಕ್ರಮಕ್ಕೆ ಸಂಸದೆ ಸೂಚನೆ  ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  ವಾಯುಭಾರ ಕುಸಿತದಿಂದ ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿಯೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ನದಿ ಪಾತ್ರದಲ್ಲಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ತಿಳಿಸಿದ್ದಾರೆ.  ಮಳೆಯಿಂದ ಮನೆ ಕುಸಿದು ಸಂಕಷ್ಟದಲ್ಲಿರುವ ಜನರ ರಕ್ಷಣೆ ಹಾಗೂ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.