ದಾವಣಗೆರೆ : ಮೂರು ದಿನಗಳ ಬಿಡುವಿನ ನಂತರ ಜಿಲ್ಲೆಯಲ್ಲಿ ಗುರುವಾರ ಮತ್ತೆ ಮಳೆಯಾಯಿತು. ನಗರದಲ್ಲಿ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ವರ್ಷಧಾರೆಯಾಯಿತು. ರಸ್ತೆಗಳ ಮೇಲೆ ನೀರು ಹರಿಯಿತು. ವಾತಾವರಣದಲ್ಲಿ ತಂಪು ಆವರಿಸಿತ್ತು.
ಜಗಳೂರು, ಹರಿಹರ ಭಾಗದಲ್ಲಿ ಉತ್ತಮ ಮಳೆಯಾಯಿತು. ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳಲ್ಲಿ ಜಿಟಿ ಜಿಟಿ ಮಳೆ ಸುರಿಯಿತು. ಮಾಯಕೊಂಡ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು.
ಮಳೆ ಬಿಡುವು ಕೊಟ್ಟಿದ್ದು ಬಿತ್ತನೆಗೆ ಅನುಕೂಲವಾಯಿತು. ಜಿಲ್ಲೆಯಲ್ಲಿ ಇದುವರೆಗೆ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ (ಶೇ. 13) ಬಿತ್ತನೆಯಾಗಿದೆ. ಕೃಷಿಕರು ರೈತ ಸಂಪರ್ಕ ಕೇಂದ್ರಗಳಿಗೆ ಬಂದು ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ.
ಗುರುವಾರ ಬೆಳಗ್ಗೆ ವರೆಗೆ ಜಿಲ್ಲೆಯಲ್ಲಿ ಸರಾಸರಿ 1.5 ಮಿ.ಮೀ. ಮಳೆಯಾಗಿತ್ತು. ಚನ್ನಗಿರಿ ತಾಲೂಕಿನಲ್ಲಿ 1.5 ಮಿ.ಮೀ, ದಾವಣಗೆರೆ ಮತ್ತು ಹರಿಹರ ತಾಲೂಕುಗಳಲ್ಲಿ ತಲಾ 0.6 ಮಿ.ಮೀ, ಹೊನ್ನಾಳಿ 0.9 ಮಿ.ಮೀ, ಜಗಳೂರು 2.1 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 3.7 ಮಿ.ಮೀ. ಮಳೆಯಾಗಿದೆ.