ಜಿಲ್ಲೆ

ರೈಲ್ವೆ ಗೇಟ್ ದಾಟುವಾಗ ಸುರಕ್ಷತೆಗೆ ಇರಲಿ ಆದ್ಯತೆ

ರಮೇಶ ಜಹಗೀರದಾರ್

ದಾವಣಗೆರೆ : ಸಾರ್ವಜನಿಕರು  ರೈಲ್ವೆ ಗೇಟ್ ದಾಟುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ನಿರೀಕ್ಷಕ ಬಿ.ಎನ್. ಕುಬೇರಪ್ಪ ಹೇಳಿದರು.
 ಅಂತಾರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನದ ನಿಮಿತ್ತ ದಾವಣಗೆರೆ-ಹರಿಹರ ರೈಲು ನಿಲ್ದಾಣಗಳ ನಡುವಿನ ಎಲ್‌ಸಿ ಗೇಟ್ ಸಂಖ್ಯೆ 207 ರಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ 2003 ರಲ್ಲಿ ತಿದ್ದುಪಡಿ ಮಾಡಲಾದ ರೈಲ್ವೆ ಕಾಯ್ದೆ 1989 ರ ಸೆ. 160 ರ ಪ್ರಕಾರ, ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು. ಇದರ ಅಡಿಯಲ್ಲಿ 5 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
 ರಸ್ತೆ ಬಳಕೆದಾರರು ರೈಲ್ವೆ ಗೇಟನ್ನು ಮುಚ್ಚುವಾಗ ಅಥವಾ ತೆರೆಯುವಾಗ ನಿಲುಗಡೆ ಸೂಚಕವನ್ನು ಗಮನಿಸಿ, ನಂತರ ಗೇಟ್ ಸಂಪೂರ್ಣವಾಗಿ ತೆರೆದಿದೆ ಮತ್ತು ಗೇಟ್ ದಾಟುವುದಕ್ಕಿಂತ ಮೊದಲು ಯಾವುದೆ ರೈಲು ಹಾದು ಹೋಗುತ್ತಿಲ್ಲ ಎಂದು ಖಚಿತಪಡಿಸಿಕೊಂಡು ದಾಟಬೇಕು. ಅವಸರದಲ್ಲಿ ಗೇಟ್ ದಾಟಲು ಪ್ರಯತ್ನಿಸಿದರೆ ಅಪಘಾತಕ್ಕೆ ಕಾರಣವಾಗಬಹುದು. ಜೀವ ಹಾನಿ, ರೈಲ್ವೆ ಆಸ್ತಿ ಮತ್ತು ಖಾಸಗಿ ಆಸ್ತಿ ಹಾನಿಗೆ ದಾರಿ ಮಾಡಿಕೊಡಬಹುದು ಎಂದು ತಿಳಿಸಿದರು.
 ವಾಹನ ಸವಾರರಿಗೆ ಕರಪತ್ರಗಳನ್ನು ನೀಡಲಾಯಿತು. ರೈಲ್ವೆ ಗೇಟ್ ಬಳಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
 ಆರ್‌ಪಿಎಫ್ ಸಹಾಯಕ ಉಪ ನಿರೀಕ್ಷಕಿ ಲಕ್ಷ್ಮವ್ವ ಪಾಟೀಲ್, ಹಿರಿಯ ವಿಭಾಗ ಇಂಜಿನಿಯರ್ ನಿರಂಜನ್, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.