ದಾವಣಗೆರೆ : ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಇಬ್ಬರು ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜೂನಿಯರ್ ಅಸಿಸ್ಟಂಟ್ ಬಸವಗೌಡ ನಡುಮನಿ ಮತ್ತು ಕೆಆರ್‌ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ ಲೋಕಾಯುಕ್ತ ದಾಳಿಗೆ ಒಳಗಾದವರು. ಬಸವಗೌಡ ಅವರ ದಾವಣಗೆರೆ ನಿವಾಸ, ರಾಣೇಬೆನ್ನೂರು ಸುತ್ತಲಿನ ಕೆಲವು ಗ್ರಾಮಗಳು ಸೇರಿ 7 ಕಡೆ ದಾಳಿ ನಡೆಸಲಾಯಿತು. ಅವರಿಗೆ 6 ಕಡೆ 20 ಎಕರೆ ಕೃಷಿ ಜಮೀನಿದೆ. 1 ಕಾರು, 4 ಬೈಕ್, 1 ಟ್ರಾೃಕ್ಟರ್, 203 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಪತ್ತೆಯಾಗಿವೆ. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಸರಳಾ, ತುಮಕೂರು, ಶಿವಮೊಗ್ಗ, ಗದಗ ಜಿಲ್ಲೆಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಗದೀಶ್ ನಾಯ್ಕ ಅವರು 3 ಮನೆ, 5 ನಿವೇಶನ, 23 ಲಕ್ಷದ ಕೃಷಿ ಜಮೀನು, 1.82 ಲಕ್ಷ ಮೌಲ್ಯದ ಒಡವೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಶಿವಮೊಗ್ಗದಲ್ಲೂ ದಾಖಲೆಗಳ ಪರಿಶೀಲನೆ ಕಾರ್ಯ ಸಂಜೆವರೆಗೂ ಮುಂದುವರಿದಿತ್ತು. ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.