ಜಿಲ್ಲೆ

ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ: ಬರಗಾಲಕ್ಕೆ ತುತ್ತಾದ ರೈತರ ಬೆಳೆ ಹಾನಿಗೆ ಪರಿಹಾರ, ಬಗರ್‌ಹುಕುಂ ಸಾಗುವಳಿದಾರರಿಗೆ ಶೀಘ್ರ ಹಕ್ಕುಪತ್ರ ವಿತರಣೆ, ಕೃಷಿ ಪಂಪ್ ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಮಂಡಳಿಯಿಂದ ತಾಲೂಕು ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
 ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಬೇಡಿಕೆಗಳ ಬಗ್ಗೆ ಘೋಷಣೆಗಳನ್ನು ಕೂಗಿದರು.
 ಎಐಕೆಎಸ್ ಜಿಲ್ಲಾಧ್ಯಕ್ಷ ಎಚ್.ಜಿ. ಉಮೇಶ್ ಮಾತನಾಡಿ, ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ರೈತರು ಬೆಳೆಗೆ ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಅವರಿಗೆ ಸಮರ್ಪಕವಾಗಿ ನೀರು ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯ ಹೊಸ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
 ರಾಜ್ಯದ ಎಲ್ಲೆಡೆ ಮಳೆ ಕೊರತೆ ಕಾರಣ 236 ತಾಲೂಕುಗಳ ಪೈಕಿ 161 ತಾಲೂಕುಗಳು ತೀವ್ರ ಬರಗಾಲ ಹಾಗೂ 34 ತಾಲೂಕುಗಳು ಸಾಧಾರಣ ಬರಗಾಲಕ್ಕೆ ತುತ್ತಾಗಿವೆ. 195 ತಾಲೂಕುಗಳ ರೈತರು ಬಿತ್ತಿದ ಮತ್ತು ಬೆಳೆ ಹಂತದಲ್ಲಿದ್ದ ಕೃಷಿ ಬೆಳೆಗಳು ನಷ್ಟಕ್ಕೊಳಗಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳು ಕೂಡ ಅತಂಕದಲ್ಲಿವೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
 ಬಗರ್‌ಹುಕುಂ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಅಕ್ರಮ-ಸಕ್ರಮ ಸಮಿತಿಗಳನ್ನು ರಚಿಸಿ ಕಾರ್ಯರೂಪಕ್ಕೆ ತರಬೇಕು. ಅರಣ್ಯ ಭೂಮಿ ಹಕ್ಕು ಮಾನ್ಯತೆ ಕಾನೂನಿನಲ್ಲಿ ಅರ್ಹ ಅರ್ಜಿದಾರರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಹಕ್ಕುಪತ್ರ ನೀಡಬೇಕು. ಈಗಾಗಲೇ ತಾಂತ್ರಿಕ ಲೋಪದ ಕಾರಣಕ್ಕೆ ತಿರಸ್ಕೃತಗೊಂಡ ಎಲ್ಲ ಅರ್ಹ ಭೂ ರಹಿತ ಆರ್ಜಿದಾರರಿಗೂ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ವಿಶೇಷ ನಿಯಮಾವಳಿ ರೂಪಿಸಬೇಕು ಎಂದರು.
 ಮುಖಂಡರಾದ ವಿ. ಲಕ್ಮಣ್, ಐರಣಿ ಚಂದ್ರು, ಲೋಕಿಕೆರೆ ರುದ್ರೇಶ್, ಎಸ್.ಎಂ. ಸಿದ್ದಲಿಂಗಪ್ಪ ಹಾಲೇಕಲ್ಲು, ಆವರಗೆರೆ ಎ.ತಿಪ್ಪೇಶಿ, ಎಂ.ಮಂಜಪ್ಪ, ಕೆ.ಬಾನಪ್ಪ, ಎಲ್.ಕೆ.ಉಮೇಶ್, ವಿರೂಪಾಕ್ಷಪ್ಪ, ಯರಗುಂಟೆ ಸುರೇಶ್, ಡಿ.ಷಣುಗಂ, ಎ.ಮರಿಯಪ್ಪ, ಎಸ್.ಮುರುಗೇಶ್ ಇದ್ದರು.