ದಾವಣಗೆರೆ : ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಬಂಧನವನ್ನು ಖಂಡಿಸಿ ವೇದಿಕೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಮಹಾನಗರ ಪಾಲಿಕೆ ಆವರಣದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ರೈಲು ನಿಲ್ದಾಣದ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ಕನ್ನಡದ ಪರವಾಗಿ ಮಾತನಾಡುತ್ತ, ಇನ್ನೊಂದು ಕಡೆ ಹೋರಾಟಗಾರರನ್ನು ಹತ್ತಿಕ್ಕುತ್ತಿದ್ದಾರೆ ಎಂದು ದೂರಿದರು. ನ್ಯಾಯಯುತ ಕೇಸ್ ಮಾಡಲಿ, ಆದರೆ ಸುಳ್ಳು ಪ್ರಕರಣ ಹಾಕುವುದು ಪೋಲಿಸ್ ಇಲಾಖೆಗೆ ಶೋಭೆ ತರುವುದಿಲ್ಲ. ಇಂಥ ತೀರ್ಮಾನ ತೆಗೆದುಕೊಂಡ ಪೊಲೀಸ್ ಅಧಿಕಾರಿಯನ್ನು ಅಮಾನತು ಪಡಿಸಬೇಕು. ರಾಜ್ಯ ಸರ್ಕಾರ ಕರವೇ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಆಲೂರು ನಾಗಮ್ಮ, ಮಂಜುಳಾ ಗಣೇಶ್, ಅಮಾನುಲ್ಲಾ ಖಾನ್, ಇಮ್ತಿಯಾಜ್, ವಿನಯ್ ಪಾಲ್ಗೊಂಡಿದ್ದರು.