ದಾವಣಗೆರೆ : ಜಿಲ್ಲಾ ಬಂಜಾರ ಮೀಸಲಾತಿ ಹೋರಾಟ ಸಮಿತಿಯಿಂದ, ನ್ಯಾ. ನಾಗಮೋಹನ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆ ಮಾರ್ಗವಾಗಿ ತೆರಳಿ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಮಾನವ ಸರಪಳಿ ನಿರ್ಮಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಸಂತ ಸೇವಾಲಾಲ್ ಅವರ ಪುತ್ಥಳಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕೈಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಲಂಬಾಣಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಹಿಳೆಯರೂ ಭಾಗವಹಿಸಿದ್ದರು. ರಾಜ್ಯ ಸರ್ಕಾರ ಒಳ ಮೀಸಲಾತಿ ವರ್ಗೀಕರಣದಲ್ಲಿ ಬಂಜಾರ ಸಮುದಾಯದ ಸಾಂವಿಧಾನಿಕ ಮೀಸಲಾತಿಯನ್ನು ಕಿತ್ತುಕೊಳ್ಳುವ ಅಥವಾ ಕಡಿಮೆಗೊಳಿಸುವ ಯಾವುದೇ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರು ಸಂದೇಶ ರವಾನಿಸಿದರು. ನಾಗಮೋಹನ ದಾಸ್ ವರದಿಯಲ್ಲಿ ಸ್ಪಶ್ಯ, ಅಸ್ಪಶ್ಯ ಪದಗಳ ಬಳಕೆ ಇದೆ, ಇದು ನಿಷಿದ್ಧವಾಗಿದ್ದರೂ ಆ ಪದವನ್ನು ಬಳಸಿ ಬಂಜಾರ ಸಮಾಜವನ್ನು ಸ್ಪಶ್ಯ ಗುಂಪಿನಲ್ಲಿ ಹಾಕಿರುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ನಮ್ಮನ್ನು ಅಸ್ಪಶ್ಯರೆಂದೇ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಆಯೋಗ ಸಂಗ್ರಹಿಸಿದ ವರದಿಯ ಅಂಶಗಳು ಅಪೂರ್ಣ, ಅವೈಜ್ಞಾನಿಕ, ಅಸ್ಪಷ್ಟ ದತ್ತಾಂಶ ಮತ್ತು ನ್ಯಾಯಸಮ್ಮತವಲ್ಲದ ಶಿಫಾರಸುಗಳನ್ನು ಒಳಗೊಂಡಿದೆ. ಕಳೆದ 50 ವರ್ಷಗಳಿಂದ ಪರಿಶಿಷ್ಟ ಜಾತಿಗಳ 101 ಸಮುದಾಯಗಳ ಸ್ಥಿತಿಗತಿಗಳ ಮಾಹಿತಿ ಮತ್ತು ಈ ಸಮೀಕ್ಷೆಯ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು, ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದು ಒತ್ತಾಯಿಸಿದರು. ಪೂರ್ವಗ್ರಹ ಪೀಡಿತವಾಗಿ ವರದಿ ತಯಾರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ವರದಿ ಏಕಪಕ್ಷೀಯವಾಗಿದ್ದು ಅದನ್ನು ತಿರಸ್ಕರಿಸಿ, ತ್ರಿಸದಸ್ಯ ಆಯೋಗ ಇಲ್ಲವೇ ಸದನ ಸಮಿತಿ ರಚಿಸಿ ನಂತರ ಎಂಪಿಕಲ್ ಡಾಟಾ ಆಧಾರದಲ್ಲಿ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿವಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಬಸವರಾಜ ನಾಯ್ಕ, ಪಾಲಿಕೆ ಮಾಜಿ ಸದಸ್ಯ ಶಿವಪ್ರಶ್ಶ್, ಮಂಜಾನಾಯ್ಕ, ಮುಖಂಡರಾದ ಅನಿಲ್ ನಾಯ್ಕ, ಹನುಮಂತ ನಾಯ್ಕ, ರಮೇಶ ನಾಯ್ಕ, ಮಲ್ಲೇಶ್ ನಾಯ್ಕ, ಮಂಜು ನಾಯ್ಕ, ಚಿನ್ನಸಮುದ್ರ ಶೇಖರ ನಾಯ್ಕ ಇತರರು ಪಾಲ್ಗೊಂಡಿದ್ದರು.