ದಾವಣಗೆರೆ : ಕಾರ್ಮಿಕರ ದುಡಿಮೆಯ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಿಸಿದ ಆದೇಶ ಹಿಂಪಡೆಯಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಈ ಸಂಬಂಧ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಕೇಂದ್ರ ಸರ್ಕಾರ ಕಳೆದ 9 ವರ್ಷಗಳಿಂದ ದೇಶದ ಜನರಿಗೆ ಸಂಕಷ್ಟಗಳ ಸರಮಾಲೆಯನ್ನೇ ಉಡುಗೊರೆ ನೀಡಿದೆ. ನಿರುದ್ಯೋಗ ಹೆಚ್ಚುತ್ತಿದೆ. ನೋಟು ಅಮಾನ್ಯೀಕರಣದಿಂದ ಸ್ವಯಂ ಉದ್ಯೋಗಿಗಳು ಬೀದಿ ಪಾಲಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡತನ ಹೆಚ್ಚಾಗಿ ಆರ್ಥಿಕ ಕುಸಿತ ತಲೆದೋರಿದೆ ಎಂದು ದೂರಿದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಲಕ್ಷಾಂತರ ಹುದ್ದೆ ಖಾಲಿಯಿದ್ದರೂ ನೇಮಕಾತಿ ಮಾಡುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ನೌಕರರನ್ನು ವಜಾಗೊಳಿಸಲಾಗುತ್ತಿದೆ ಎಂದರು.
ಸರ್ಕಾರಿ ಇಲಾಖೆಗಳು, ಕಾರ್ಖಾನೆಗಳಲ್ಲಿ ಗುತ್ತಿಗೆ ಪದ್ದತಿ ಜಾರಿಗೊಳಿಸಿ ಇಎಸ್‌ಐ, ಪಿಎಫ್ ಹಾಗೂ ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ದುಡಿಮೆಯ ಅವಧಿಯನ್ನು ಮೊಲಿದ್ದಂತೆ 8 ತಾಸಿಗೆ ನಿಗದಿಪಡಿಸಬೇಕು. 31,500 ರೂ.ಗೆ ವೇತನ ಹೆಚ್ಚಿಸಬೇಕು. ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ ಮಾಸಿಕ 8 ಸಾವಿರ ರೂ. ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆ, ನರೇಗಾ ದುಡಿತದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಚ್.ಜಿ. ಉಮೇಶ್, ರಾಘವೇಂದ್ರ ನಾಯರಿ, ಎನ್.ಎಚ್. ರಾಮಣ್ಣ, ಮಹಮದ್ ರಫೀಕ್, ಆವರಗೆರೆ ವಾಸು, ರಂಗನಾಥ್, ಐರಣಿ ಚಂದ್ರು, ಸರೋಜಾ, ಸತೀಶ್ ಅರವಿಂದ್, ಜಬೀನಾ ಖಾನಂ, ಯರಗುಂಟೆ ಸುರೇಶ್, ಕೆ.ಎಚ್. ಆನಂದರಾಜ್, ಕೆ. ಬಾನಪ್ಪ, ಶ್ರೀನಿವಾಸ್ ಇತರರು ಪ್ರತಿಭಟನೆಯಲ್ಲಿದ್ದರು.