ದಾವಣಗೆರೆ : ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವುದನ್ನು ಖಂಡಿಸಿ ಹಾಗೂ ಈ ಷಡ್ಯಂತ್ರದಲ್ಲಿರುವ ಎಲ್ಲರನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಘಟಕದಿಂದ ಆ. 25ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಉತ್ತರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಕೆ. ತಾರೇಶ್ವರ ನಾಯ್ಕ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಎಸಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಲಾಗುವುದು. ಆದ್ದರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಸಾಲ ಸೌಲಭ್ಯ ಪಡೆದವರು, ಶ್ರೀ ಮಂಜುನಾಥ ಸ್ವಾಮಿ ಭಕ್ತರು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಮಹಾನಗರ ಪಾಲಿಕೆಯ ಮಾಜಿ ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಸೌಜನ್ಯ ಪರ ಹೋರಾಟ ಮಾಡುವವರ ಸೋಗಿನಲ್ಲಿ ಕೆಲ ಸಂಘ-ಸಂಸ್ಥೆಗಳು ಧರ್ಮಸ್ಥಳ ವಿಚಾರದಲ್ಲಿ ಪಿತೂರಿ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು. ಪವಿತ್ರ ಕ್ಷೇತ್ರದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವ ಗಿರೀಶ್ ಮಟ್ಟೆಣ್ಣವರ್, ಮಹೇಶ ತಿಮ್ಮರೋಡಿ, ಸಮೀರ್ ಸೇರಿ ಹಲವರನ್ನು ಬಂಧಿಸಬೇಕು ಹಾಗೂ ಇವರಿಗೆ ಆರ್ಥಿಕ ನೆರವು ಯಾವುದರ ಮೂಲಕ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಕೈವಾಡವೂ ಇದೆ. ಯಾರೋ ಒಬ್ಬ ವ್ಯಕ್ತಿ ಬಂದು ನಾನು ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆಂದು ಹೇಳಿದ ತಕ್ಷಣ ಹಿಂದೆ, ಮುಂದೆ ಯೋಚಿಸದೇ ಸರ್ಕಾರ ಎಸ್‌ಐಟಿ ರಚಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದರು. ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ್, ಮಂಜುನಾಥ ನಾಯ್ಕ, ಮುಖಂಡರಾದ ಕೆ.ಜಿ. ಕಲ್ಲಪ್ಪ, ಶ್ರೀನಿವಾಸ್, ಎನ್.ಎಚ್. ಹಾಲೇಶ ನಾಯಕ, ಗುತ್ತೂರು ಮಂಜುನಾಥ, ಕೊಟ್ಟೂರೇಶ ಗೌಡ, ಬಸವರಾಜಯ್ಯ ಇದ್ದರು.