ದಾವಣಗೆರೆ : ಆವರಗೆರೆಯ ಹಳ್ಳದ ಖರಾಬು ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಬಣ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಆವರಗೆರೆಯಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಬಗ್ಗೆ ಘೋಷಣೆಗಳನ್ನು ಕೂಗಿ, ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಖರಾಬು ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಮಹಾನಗರ ಪಾಲಿಕೆ ಯಾವುದೇ ನೋಟಿಸ್ ಕೊಡದೇ ಮಧ್ಯರಾತ್ರಿ ತೆರವುಗೊಳಿಸಿದೆ ಎಂದು ದೂರಿದರು. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದಾಗ ಮುಂದಿನ ದಿನಗಳಲ್ಲಿ ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಯಾವುದೇ ಸ್ಪಂದನೆ ಇಲ್ಲ, ನಮಗೆ ಹಕ್ಕುಪತ್ರ ಕೊಡುವ ತನಕ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಕೆಲವರು ಪಕ್ಕದ ಜಮೀನಿನಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಬಾಡಿಗೆ ಮನೆ, ಖರಾಬು ಜಮೀನಿನಲ್ಲಿ ಜೀವನ ಮಾಡುತ್ತಿದ್ದಾರೆ. ಈಗ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಸಮಸ್ಯೆ ಹೇಳಿಕೊಂಡರು. ಸಮಿತಿಯ ಜಿಲ್ಲಾ ಸಂಚಾಲಕ ಡಿ. ಹನುಮಂತಪ್ಪ ಮಾತನಾಡಿ, ಹಕ್ಕುಪತ್ರ ನೀಡುವಲ್ಲಿ ಮಹಾನಗರ ಪಾಲಿಕೆ ಮೀನಮೇಷ ಎಣಿಸುತ್ತಿರುವುದು ಖಂಡನೀಯ. ಶೀಘ್ರವೇ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಮಾತನಾಡಿ, ಈ ವಿಷಯವನ್ನು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಆರ್. ಗಿರೀಶ್, ಜಿ. ಮಂಜುನಾಥ್, ಎಚ್. ಬಸವರಾಜ್, ಜೆ.ಡಿ. ಕೃಷ್ಣಮೂರ್ತಿ, ಅಂಬರೀಶ್, ಎಂ.ಬಿ. ಪರಶುರಾಮ್, ವಿ. ಪ್ರವೀಣ್ ಕುಮಾರ್, ರೇಖಾ, ಹೊನ್ನಮ್ಮ, ಮಂಗಳ, ಚಂದ್ರಮ್ಮ, ರೇಣುಕಮ್ಮ ಇದ್ದರು.