ಜಿಲ್ಲೆ

ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ

ರಮೇಶ ಜಹಗೀರದಾರ್

ದಾವಣಗೆರೆ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ, ಕಾರ್ಪೋರೇಟ್ ಪರವಾದ ನೀತಿಗಳನ್ನು ವಿರೋಧಿಸಿ ಕೇಂದ್ರ ರೈತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯ ಮೇರೆಗೆ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.  ಪ್ರತಿಭಟನಾಕಾರರು ಜಯದೇವ ವೃತ್ತದಿಂದ ಗಾಂಧಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಿ ಸರ್ಕಾರಗಳ ನೀತಿಯ ವಿರುದ್ಧ ಘೋಷಣೆ ಕೂಗಿದರು.  ದೇಶದಲ್ಲಿ ದುಡಿಯುವ ಜನರ ಮೇಲೆ ಒಂದಾದ ನಂತರ ಮತ್ತೊಂದು ದಾಳಿಯಾಗುತ್ತಿವೆ. ಇದರಿಂದ ಬಡತನ, ಹಸಿವು, ಅಪೌಷ್ಟಿಕತೆಯೊಡನೆ ನಿರ್ಗತಿಕರಾಗಿಸುವುದರ ಜತೆಗೆ ನಿರುದ್ಯೋಗಿಗಳ ಸಂಖ್ಯೆ ಏರುತ್ತಲಿದೆ. ಕಾರ್ಪೊರೇಟ್ ಮತ್ತು ದೊಡ್ಡ ಉದ್ದಿಮೆಗಳ ಲಾಭವು ಅನೇಕ ಪಟ್ಟು ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.  ಇದೀಗ ಗುಲಾಮಗಿರಿಯ ನೀಲನಕ್ಷೆಯಂತಿರುವ ಕಾರ್ಮಿಕ ಸಂಹಿತೆ ಜಾರಿಗೆ ತಂದು ದುಡಿಯುವ ವರ್ಗದ ಜನರ ಮೇಲೆ ಹೇರಲು ಆತುರದಿಂದ ಹವಣಿಸುತ್ತಿದೆ. ಕೆಲಸ ಹಾಗೂ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ದುಡಿಮೆಯ ಸಮಯ, ಕನಿಷ್ಠ ವೇತನಗಳು, ಸಾಮಾಜಿಕ ಭದ್ರತೆಗೆ ಗಂಭೀರ ಸವಾಲು ಒದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.  ನರೇಗಾ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಇತರ ಕಲ್ಯಾಣ ಯೋಜನೆ, ಜನ ಸಂಬಂಧಿತ ಕಾರ್ಯಕ್ರಮಗಳಿಗೆ ಬಜೆಟ್ ಹಂಚಿಕೆಯಲ್ಲಿ ನಿರಂತರ ಕುಸಿತ ಮತ್ತು ತೀವ್ರ ಕಡಿತವನ್ನು ಸತತವಾಗಿ ಮಾಡಲಾಗುತ್ತಿದೆ ಎಂದರು.  ಖಾಸಗೀಕರಣ ನೀತಿಯನ್ನು ಮುಂದುವರಿಸುವುದರ ಜತೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಮೂಲಕ  ರಸ್ತೆ, ರೈಲ್ವೆ, ಏರ್ವೇಸ್, ಬಂದರು, ಅಂಚೆ, ದೂರಸಂಪರ್ಕ ಮತ್ತು ಗಣಿಗಾರಿಕೆಯ ಮೂಲಸೌಕರ್ಯ ವಲಯದಲ್ಲಿಯೂ ಸಹ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಕಂಪನಿಗಳು ಕಡಿಮೆ ಬೆಲೆಗೆ ಲೂಟಿ ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಜುಲೈ 9ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದಲ್ಲಿ ದುಡಿಯುವ ಜನತೆ ಪಾಲ್ಗೊಳ್ಳಬೇಕು ಎಂದು ಜೆಸಿಟಿಯು ಮತ್ತು ಎಸ್‌ಕೆಎಂನಿಂದ ಕರೆ ನೀಡಲಾಯಿತು.  ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ರೈತ ವಿರೋಧಿ ಮೂರು ಕರಾಳ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಬಗರ್‌ಹುಕುಂ ರೈತರಿಗೆ ಪಟ್ಟಾ ನೀಡಬೇಕು. ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಮ್ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರಿಗೆ ರಾಷ್ಟ್ರೀಯ ಕನಿಷ್ಠ ವೇತನ 26 ಸಾವಿರ ರೂ. ಪ್ರತಿ ತಿಂಗಳು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.  ಮುಖಂಡರಾದ ಎಚ್.ಜಿ. ಉಮೇಶ್, ಮಂಜುನಾಥ್ ಕೈದಾಳೆ, ಹೊನ್ನೂರು ಮುನಿಯಪ್ಪ, ಬಲ್ಲೂರು ರವಿಕುಮಾರ್, ಆವರಗೆರೆ ಚಂದ್ರು, ಆನಂದ್ ರಾಜು, ಮಧು ತೊಗಲೇರಿ, ಗುಮ್ಮನೂರು ಬಸವರಾಜ್, ಸತೀಶ್ ಅರವಿಂದ್, ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ್ ಕುಕ್ಕುವಾಡ, ಶ್ರೀನಿವಾಸ್, ಐರಣಿ ಚಂದ್ರು, ಶಿವಾಜಿರಾವ್ ಇನ್ನಿತರೆ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.