ಜಿಲ್ಲೆ

ಒಳ ಮೀಸಲಾತಿ ಜಾರಿ ವಿಳಂಬಕ್ಕೆ ಖಂಡನೆ

ರಮೇಶ ಜಹಗೀರದಾರ್

ದಾವಣಗೆರೆ : ಒಳ ಮೀಸಲಾತಿ ಜಾರಿ ವಿಳಂಬ ನೀತಿ ಖಂಡಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.  ನ್ಯಾ. ನಾಗಮೋಹನ ದಾಸ್ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಒಳಮೀಸಲಾತಿ ವರ್ಗೀಕರಣದ ಕುರಿತು ಹೇಳಿಲ್ಲ, ಬದಲಾಗಿ ಮತ್ತೊಂದು ಸಮೀಕ್ಷೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.  ಹರಿಯಾಣದ ಬಿಜೆಪಿ ಸರ್ಕಾರ ನ್ಯಾಯಾಲಯದ ತೀರ್ಪು ಬಮದ ಒಂದು ವಾರದಲ್ಲೇ ಒಳ ಮೀಸಲಾತಿ ಜಾರಿಗೊಳಿಸಿತು. ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ಒಳಮೀಸಲಾತಿ ಜಾರಿಗೆ ಆದೇಶ ಮಾಡಿವೆ. ರಾಜ್ಯ ಸರ್ಕಾರ ಮಾತ್ರ ನೆಪ ಹುಡುಕುತ್ತ ಮೀನಮೇಷ ಎಣಿಸುತ್ತಿದೆ ಎಂದರು.  ಸರ್ಕಾರ ತನ್ನ ನಡೆಯನ್ನು ಸರಿಪಡಿಸಿಕೊಳ್ಳಬೇಕು. ಮಾದಿಗರ ಪಾಲಿನ ಪ್ರತ್ಯೇಕ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.  ಸಂಘಟನೆಯ ಮುಖಂಡರಾದ ಆಲೂರು ನಿಂಗರಾಜ, ರಾಜು ಶಾಮನೂರು, ಆನಂದ್, ಕರಿಯಪ್ಪ, ಹರೀಶ್, ಷಣ್ಮುಖ ಇದ್ದರು.