ದಾವಣಗೆರೆ : ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಒಳ ಮೀಸಲಾತಿ ಜಾರಿಯಾದ ಬಳಿಕ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಒಳ ಮೀಸಲಾತಿ ಜಾರಿಯಾಗುವ ವರೆಗೂ ಯಾವುದೇ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡುವುದಿಲ್ಲ ಎಂದಿದ್ದ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರನ್ನೊಳಗೊಂಡ ಸಚಿವ ಸಂಪುಟದ ಉಪ ಸಮಿತಿಯು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿವಿಧ ಇಲಾಖೆಗಳಲ್ಲಿರುವ 916 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಎಚ್ಚರಿಕೆ ರೀತಿಯ ಸಂದೇಶವನ್ನು ಉಪ ಸಮಿತಿ ನೀಡಿದೆ. ನೇಮಕಾತಿ ಆದ ಪಕ್ಷದಲ್ಲಿ ಹಲವು ತಳಜಾತಿಗಳ ಪ್ರತಿಭಾವಂತ ವಿದ್ಯಾವಂತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಒಳ ಮೀಸಲಾತಿ ಜಾರಿಯಾದ ನಂತರವೇ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ, ಎಚ್. ಮಲ್ಲಿಕಾರ್ಜುನ ವಂದಾಲಿ, ಡಿ, ರುದ್ರೇಶ್, ಬಿ.ಆರ್. ಮಂಜಾನಾಯ್ಕ್, ಗುಮ್ಮನೂರು ಮಂಜುನಾಥ್, ಎಂ. ಶಿವಕುಮಾರ್, ನಾಗರಾಜ್, ಎಚ್. ಪ್ರಶಾಂತ್, ಕೃಷ್ಣ ಪಾಲ್ಗೊಂಡಿದ್ದರು.