ಜಿಲ್ಲೆ

ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ  : ಹರಿಹರ ತಾಲೂಕು ಕ್ರೀಡಾಂಗಣದ 50 ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಹರಿಹರ ತಾಲೂಕು ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.  ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಅರೆಬೆತ್ತಲೆಯಾಗಿ ಮತ್ತು ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡಿದ್ದ ಪ್ರತಿಭಟನಾಕಾರರು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಒಂದು ದಿನದ ಧರಣಿ ನಡೆಸಿದರು.  ಹರಿಹರ ನಗರಸಭೆ ವ್ಯಾಪ್ತಿಯಲ್ಲಿ, ಯುವ ಸಬಲೀಕರಣ ಮತ್ತು ಮತ್ತು ಕ್ರೀಡಾ ಇಲಾಖೆಯ 50 ಮಳಿಗೆಗಳಿವೆ. ಅವುಗಳ ಬಾಡಿಗೆ ಕರಾರು ಅವಧಿಯು 2019 ರಲ್ಲಿ ಪೂರ್ಣಗೊಂಡಿದೆ.  ಕೆಲವು ಮಳಿಗೆಗಳ ಬಾಡಿಗೆದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನುಳಿದ ಮಳಿಗೆ ಬಾಡಿಗೆದಾರರು ಪರವಾನಗಿ ಪಡೆಯದೇ ಇರುವುದು ಕಾನೂನು ಬಾಹಿರವಾಗಿರುತ್ತದೆ. ಇದುವರೆಗೆ ನಗರಸಭೆಯಿಂದ ಪರವಾನಗಿ ನವೀಕರಿದೇ ಇರುವುದರಿಂದ ಸರ್ಕಾರಕ್ಕೆ ಅಪಾರ ನಷ್ಟವಾಗಿದೆ.  ಕಾನೂನು ಬಾಹಿರವಾಗಿ ಬಹುತೇಕ ಒಳಬಾಡಿಗೆ ಕೊಟ್ಟು ಬೇರೆ ಮಳಿಗೆ ಬಾಡಿಗೆದಾರರು ಉದ್ದಿಮೆಯನ್ನು ನಡೆಸುತ್ತಿರುವ ಕಾರಣ, ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ, ಕ್ರೀಡಾ ಇಲಾಖೆಯ ನಿರ್ಲಕ್ಷೃ ವಹಿಸಿದೆ. ಜಿಲ್ಲಾಡಳಿತವೂ ಈ ವಿಚಾರದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.  ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮರು ಹರಾಜು ಕೈಗೊಳ್ಳಬೇಕು ಎಂದು ಕಳೆದ 141 ದಿನಗಳಿಂದ ನಿರಂತರವಾಗಿ ಹರಿಹರದಲ್ಲಿ ಧರಣಿ ನಡೆಸಲಾಗುತ್ತಿದೆ. ಇದುವರೆಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಮಳಿಗೆಗಳ ಹರಾಜು ಪ್ರಕ್ರಿಯೆ ಕೈಗೊಂಡಿಲ್ಲ ಎಂದು ದೂರಿದರು.  ಸಂಘಟನೆಯ ತಾಲೂಕು ಅಧ್ಯಕ್ಷ ಎಸ್. ಗೋವಿಂದ, ಮುಖಂಡರಾದ ಸಿ.ಎಚ್. ಸುನೀಲ್ ಕುಮಾರ್, ಎಂ. ಮಧು, ವಿಜಯ ಕುಮಾರ್, ಸಾಗರ್, ಸಂಜೀವಪ್ಪ, ವಸಂತ್ ಪಾಲ್ಗೊಂಡಿದ್ದರು.