ದಾವಣಗೆರೆ : ಕೇಂದ್ರ ಸರ್ಕಾರ ಐತಿಹಾಸಿಕ ರೈತ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ನೀಡಿದ್ದ ಭರವಸೆ ಈಡೇರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಎಚ್ಚರಿಕಾ ರ‌್ಯಾಲಿ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ಹೊರಟ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಕೂಡಲೇ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಜತೆ ಮಾತುಕತೆ ಪುನಾರಂಭಿಸಬೇಕು. ರೈತರ ಬೆಳೆಗಳಿಗೆ ಕನಿಷ್ಠ ದರ ಕಾಯ್ದೆ ಜಾರಿಯಾಗಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಯಾವುದೇ ರೂಪದಲ್ಲಿ ಕಾರ್ಮಿಕರ ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ಇರಬಾರದು ಎಂದು ಒತ್ತಾಯಿಸಿದರು. ಎಲ್ಲ ಅಸಂಘಟಿತ ಕಾರ್ಮಿಕರಿಗೂ ಕನಿಷ್ಠ 27 ಸಾವಿರ ರೂ. ವೇತನ ಮತ್ತು ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು. ದಮನಿತ ಸಮುದಾಯಗಳಿಗೆ ರಕ್ಷಣೆ, ಯುವಜನರಿಗೆ ಉದ್ಯೋಗ ಭದ್ರತೆ ಹಾಗೂ ಸಮಾಜದಲ್ಲಿ ಸೌಹಾರ್ದದ ವಾತಾವರಣ ಖಾತ್ರಿಯಾಗಿಸಲು ಕ್ರಮ ಕೈಗೊಳ್ಳಬೇಕು. ಜಿಎಸ್‌ಟಿ ಮತ್ತು ಸೆಸ್ ತಗ್ಗಿಸುವ ಮೂಲಕ ಬೆಲೆ ಏರಿಕೆ ತಡೆಗಟ್ಟಬೇಕು. ಸಾರ್ವಜನಿಕ ಉದ್ಯಮ ಹಾಗೂ ಸೇವೆ ಖಾಸಗೀಕರಣಗೊಳಿಸಬಾರದು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಜನರ ಬದುಕಿಗೆ ಸಂಬಂಧಿಸಿದ ವಿಚಾರಗಳನ್ನು ಕೂಲಂಕಷವಾಗಿ ಚರ್ಚಿಸಿ, ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಲು ಮೂರು ದಿನಗಳ ಜನತಾ ಅಧಿವೇಶನ ಕರೆಯಬೇಕು. ಇದರಲ್ಲಿ ಸರ್ಕಾರ ಹಾಗೂ ಜನಚಳವಳಿ ಮುಖಂಡರ ಕಡೆಯಿಂದ ಒಪ್ಪಿತವಾಗುವ ವಿಚಾರಗಳನ್ನು ಸೂಕ್ತ ಸರ್ಕಾರಿ ಪ್ರಕ್ರಿಯೆ ಮೂಲಕ ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು. ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಮುಖಂಡ ನೂರ್ ಶ್ರೀಧರ್ ಮಾತನಾಡಿ, ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ರೈತ ಹಾಗೂ ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಅಸಹಕಾರ ಚಳವಳಿ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ನೀಡಿದ್ದ ಒಂದೇ ಒಂದು ಬೇಡಿಕೆ ಈಡೇರಿಸದೇ ರೈತಕುಲಕ್ಕೆ ದ್ರೋಹ ಎಸಗಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ನಿಗದಿತ ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಎಲ್ಲ ಕಡೆಗಳಲ್ಲಿ ರಸ್ತೆ ತಡೆ, ರೈಲು ತಡೆ ಸೇರಿ ಎಲ್ಲ ಹೋರಾಟಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದರು. ಇನ್ನು ರಾಜ್ಯ ಸರ್ಕಾರ ಐದು ಗ್ಯಾರಂಟಿ ಜಾರಿ ಬಿಟ್ಟರೆ ಪ್ರಣಾಳಿಕೆಯಲ್ಲಿ ದುಡಿಯುವ ಜನರಿಗೆ ಹಾಗೂ ಜನಸಾಮಾನ್ಯರಿಗೆ ಕೊಟ್ಟ ಭರವಸೆ ಜಾರಿಗೊಳಿಸದೇ ನಿರ್ಲಕ್ಷಿಸಿದೆ. ಬಿಜೆಪಿ ಸರ್ಕಾರದ ಯಾವ ಜನ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿಲ್ಲ. ಮೂರು ದಿನಗಳ ಜನತಾ ಅಧಿವೇಶನ ಕರೆಯದಿದ್ದರೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಸಂಯುಕ್ತ ಹೋರಾಟ ಕರ್ನಾಟಕ ಮುಖಂಡರಾದ ತಾರಾದೇವಿ, ದಾವಣಗೆರೆ ಸಂಚಾಲಕರಾದ ಹೊನ್ನೂರು ಮುನಿಯಪ್ಪ , ಎಚ್.ಜಿ. ಉಮೇಶ್ ಆವರಗೆರೆ, ಮಧು ತೊಗಲೇರಿ , ಸಂಚಾಲನಾ ಸಮಿತಿಯ ಸದಸ್ಯರಾದ ಐರಣಿ ಚಂದ್ರು , ಆನಂದ್‌ರಾಜು, ಆವರಗೆರೆ ಚಂದ್ರು, ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ಬುಳ್ಳಾಪುರದ ಹನುಮಂತಪ್ಪ, ಗುಮ್ಮನೂರು ಬಸವರಾಜ್, ಆದಿಲ್‌ಖಾನ್, ನಾಗಸ್ಮಿತಾ ಇತರರು ಭಾಗವಹಿಸಿದ್ದರು