ದಾವಣಗೆರೆ : ಮಣಿಪುರದಲ್ಲಿ ನಡೆದ ಜನಾಂಗೀಯ ಗಲಭೆ ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಗಳಿಗೆ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರಗಳೇ ನೇರ ಹೊಣೆಯಾಗಿದ್ದು, ಎರಡೂ ಸರ್ಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದಾವಣಗೆರೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಒತ್ತಾಯಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ಪೀಪಲ್ಸ್ ಲಾಯರ್ಸ್ ಗಿಲ್ಡ್ ಪದಾಧಿಕಾರಿಗಳು ಮಣಿಪುರ ಘಟನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಂಘಟನೆ ರಾಜ್ಯ ಸಂಚಾಲಕ ಅನೀಸ್ ಪಾಷಾ ಮಾತನಾಡಿ, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ಘಟನೆ ತೀವ್ರ ಖಂಡನೀಯ. ಇದರಿಂದ ವಿಶ್ವದ ಮುಂದೆ ದೇಶವೇ ತಲೆತಗ್ಗಿಸುವಂತಾಗಿದೆ. ಸುಮಾರು 82 ದಿನಗಳಿಂದ ಅಲ್ಲಿ ದಂಗೆ ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಯಂತ್ರಿಸಲು ವಿಫಲವಾಗಿವೆ ಎಂದು ದೂರಿದರು.
ದೇಶದ ಪ್ರಧಾನಿ ಪ್ರಜೆಗಳಿಗೆ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುವ ಬದಲು ಚುನಾವಣಾ ಪ್ರಚಾರದ ಪ್ರವಾಸದಲ್ಲಿ ನಿರತರಾಗಿದ್ದರಿಂದ ದುಷ್ಕೃತ್ಯಗಳು ಹೆಚ್ಚಾಗಲು ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಾಂಗೀಯ ಗಲಭೆಯನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ಕ್ರಮ ಕೈಗೊಂಡಿದ್ದರೆ ಇಂತಹ ಅನಾಹುತಗಳು ನಡೆಯುತ್ತಿರಲಿಲ್ಲ. ಸರ್ವೋಚ್ಛ ನ್ಯಾಯಾಲಯ ಚಾಟಿ ಬೀಸಿದ ನಂತರ ಕೇಂದ್ರ ಸರ್ಕಾರ ಎಚ್ಚೆತ್ತ್ತುಕೊಂಡಿದೆ ಎಂದು ತಿಳಿಸಿದರು.
ವಕೀಲರಾದ ಆಂಜನೇಯ ಗುರೂಜಿ, ಪ್ರಕಾಶ್ ಪಾಟೀಲ್, ಬಿ.ಎಂ.ಬೈರೇಶ್ವರ, ಲೋಕಿಕೆರೆ ಪ್ರದೀಪ, ಎಚ್.ಎಂ.ನಾಯ್ಕ, ಎಸ್.ಸವಿತ, ಮಂಜುಳಾ, ನಾಗರಾಜ, ವಾಗೀಶ್ ಕಟಗಿಹಳ್ಳಿಮಠ, ಪ್ರಕಾಶ್ ಬಾತಿ, ಚಕ್ರವರ್ತಿ, ರುದ್ರೇಶ್, ಹನೀಫ್, ಗುರುಮೂರ್ತಿ, ಅಜಯ್, ಅಂಜಿನಪ್ಪ, ಶಿವರಾಜ್, ಕರಿಯಪ್ಪ, ಮಾಲತೇಶ್, ಪಾಪಣ್ಣ, ಮುಸ್ತಫಾ ಇದ್ದರು.