ದಾವಣಗೆರೆ : ರಾಜ್ಯಪಾಲ ಹುದ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆ ಮಾರ್ಗವಾಗಿ ತೆರಳಿ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ರವಾನಿಸಿದರು. ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆ ಗಮನಿಸಿದರೆ, ಜನತಂತ್ರ ವ್ಯವಸ್ಥೆಯಲ್ಲಿ ಬಹುಮತದೊಂದಿಗೆ ಆಯ್ಕೆಯಾದ ಸರ್ಕಾರವನ್ನು ಬಿಜೆಪಿಯು ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರನ್ನು ಬಳಸಿಕೊಂಡು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಕುಟಿಲ ನೀತಿಯು ಬಹಿರಂಗವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣವಾಗಲಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಆದರೆ ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಹೇಳಿದರು. ರಾಜ್ಯಪಾಲರ ಕಚೇರಿಗೆ ಲೋಕಾಯುಕ್ತ ಸಂಸ್ಥೆ ಇತರೆ ಪ್ರಕರಣದಲ್ಲಿ ತನಿಖೆಗೆ ಅನುಮತಿ ಕೇಳಿ ವರ್ಷಗಳೇ ಕಳೆದರೂ ಅವುಗಳ ಬಗ್ಗೆ ಯಾವುದೇ ತೀರ್ಮಾನ ಮಾಡದ ರಾಜ್ಯಪಾಲರು, ಮುಡಾ ಪ್ರಕರಣದಲ್ಲಿ ತೆಗೆದುಕೊಂಡ ತೀರ್ಮಾನವು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ಈಗಾಗಲೇ ತಮಿಳುನಾಡು, ಕೇರಳ, ಪಾಂಡಿಚೇರಿ, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಚುನಾಯಿತ ಸರ್ಕಾರಗಳ ನಡುವೆ ಸಂಘರ್ಷ ನಡೆದಿರುವುದು ಬಯಲಾಗಿದೆ. ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿಯು ರಾಜ್ಯಪಾಲರನ್ನು ಬಳಸಿಕೊಳ್ಳುವ ಹಾದಿ ಹಿಡಿದಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಹುದ್ದೆ ರದ್ದತಿಗೆ ಇದು ಸಕಾಲವಾಗಿದೆ. ಸಂವಿಧಾನಬದ್ಧ ಒಕ್ಕೂಟ ವ್ಯವಸ್ಥೆಯನ್ನು ಉಳಿಸಲು ರಾಜ್ಯದ ಸ್ವಾಯತ್ತ ಅಧಿಕಾರದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ನಿಲ್ಲಿಸಲು, ಬಿಜೆಪಿ ಮತ್ತು ಆರ್.ಎಸ್.ಎಸ್ ಚಿಂತನೆಯನ್ನು ರಾಜ್ಯಪಾಲರ ಮೂಲಕ ಜಾರಿಗೊಳಿಸುವ ಹುನ್ನಾರ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿಗಳಾದ ಎಚ್.ಜಿ. ಉಮೇಶ್, ಆವರಗೆರೆ ವಾಸು, ಐರಣಿ ಚಂದ್ರು, ಶಿವಕುಮಾರ ಡಿ. ಶೆಟ್ಟರ್, ನೇತ್ರಾವತಿ, ಸುರೇಶ, ಲಕ್ಷ್ಮಣ, ಸರೋಜಾ, ಗದಿಗೇಶ ಪಿ. ಪಾಳೇದ, ವಿಶಾಲಾಕ್ಷಿ, ಕುಮಾರ ನಾಯ್ಕ ಇತರರು ಇದ್ದರು.