ಜಿಲ್ಲೆ

ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ರಮೇಶ ಜಹಗೀರದಾರ್

ದಾವಣಗೆರೆ : ತಿಂಗಳಿಗೆ ಸರಿಯಾಗಿ ವೇತನ ಹಾಗೂ ಸೌಲಭ್ಯ ನೀಡದಿರುವುದನ್ನು ಖಂಡಿಸಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಹೊರ ಗುತ್ತಿಗೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.  ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 270 ಜನರು ಹೊರ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿದ್ದಾರೆ. ರಾಯಚೂರು ಮೂಲದ ಏಜೆನ್ಸಿಯಿಂದ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು ನೌಕರರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಕೊಡುತ್ತಿಲ್ಲ. ಪಿಎಫ್, ಇಎಸ್‌ಐ ಹಣ ಕಟ್ಟುತ್ತಿಲ್ಲ ಎಂದು ದೂರಿದರು.  ಹೊರಗುತ್ತಿಗೆ ಐದಾರು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಸಂಬಳ ನೀಡುವ ಸಂದರ್ಭದಲ್ಲಿ ಕ್ಲಿನಿಕ್ ಮತ್ತು ನಾನ್ ಕ್ಲಿನಿಕ್ ನೌಕರರಿಂದ 2 ಸಾವಿರ ರೂ. ಮತ್ತು ಡಿ ದರ್ಜೆ ನೌಕರರಿಂದ 1ಸಾವಿರ ರೂ. ವಸೂಲಿ ಮಾಡುತ್ತಾರೆ. ಕೊಡದಿದ್ದರೆ ಕೆಲಸದಿಂದ ಕಿತ್ತು ಹಾಕುವ ಬೆದರಿಕೆಯೊಡ್ಡುತ್ತಾರೆ ಎಂದು ಆರೋಪಿಸಿದರು.  ಏಜೆನ್ಸಿ ಮದ್ಯವರ್ತಿಗಳ ಕಿರುಕುಳದಿಂದ ಬೇಸತ್ತ ಕಾರ್ಮಿಕರು ಈ ಹಿಂದೆ ಜಿಲ್ಲಾಡಳಿತ ಹಾಗೂ ಪ. ಜಾತಿ, ಪ. ಪಂಗಡಗಳ ಕುಂದು ಕೊರತೆ ಸಭೆಯ ಗಮನಕ್ಕೆ ತಂದಿದ್ದು, ಅಲ್ಲದೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರೂ ಈವರೆಗೆ ಕ್ರಮವಹಿಸಿಲ್ಲ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.  ಅಲ್ಲದೇ  ರಾಯಚೂರು ಮೂಲದ ಏಜೆನ್ಸಿ  ಪಡೆದಿರುವ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಹೊಸದಾಗಿ ಟೆಂಡರ್ ಕರೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡ ಹನುಮಂತಪ್ಪ ಎಚ್ಚರಿಸಿದರು.  ಪ್ರತಿಭಟನೆಯಲ್ಲಿ ಎಲ್ಲ ಕಾರ್ಮಿಕರು ಭಾಗವಹಿಸಿದ್ದರು.