ಜಿಲ್ಲೆ

ಬೆಳೆ ವಿಮಾ ಹಣ ಬಿಡುಗಡೆಗೆ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ : ಕಳೆದ ಮುಂಗಾರು ಹಂಗಾಮಿನ (2023-24) ಬೆಳೆ ವಿಮಾ ಪರಿಹಾರದ ಹಣ ಬಿಡುಗಡೆಗೆ ಆಗ್ರಹಿಸಿ ಜಗಳೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
 ನೀರಾವರಿ ಆಶ್ರಿತ ಜಮೀನುಗಳ ರೈತರಿಗೆ ಪರಿಹಾರ ನೀಡಲಾಗಿದ್ದು ನಮಗೇಕೆ ಕೊಟ್ಟಿಲ್ಲ. ಅವರು ಬೇರೆ, ನಾವು ಬೇರೆಯೆ ಎಂದು ಮಳೆಯಾಶ್ರಿತ ಪ್ರದೇಶಗಳ ಕೃಷಿಕರು ಪ್ರಶ್ನಿಸಿದರು. ಕೂಲಿ ಮಾಡಿ ವಿಮಾ ಕಂತನ್ನು ಕಟ್ಟಿದ್ದೇವೆ, ನಮಗೆ ಹಣ ಕೊಡಿಸಿ ಎಂದು ಪಟ್ಟು ಹಿಡಿದರು. ಬೇಕೇ ಬೇಕು, ಇನ್‌ಶೂರೆನ್ಸ್ ಹಣ ಬೇಕು ಎಂದು ಘೋಷಣೆ ಕೂಗಿದರು.
 ಜಗಳೂರು ತಾಲೂಕಿನ ಅಸಗೋಡು, ದಿದ್ದಿಗೆ, ಗುರುಸಿದ್ದಾಪುರ, ಸೊಕ್ಕೆ, ಗುತ್ತಿದುರ್ಗ, ದೇವಿಕೆರೆ, ಬಿಳಿಚೋಡು, ತೋರಣಘಟ್ಟ ಗ್ರಾಮ ಪಂಚಾಯಿತಿಗಳ ನೂರಾರು ರೈತರಿಗೆ ಬೆಳೆ ವಿಮಾ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
 ಇಷ್ಟು ಹೊತ್ತಿಗೆ ನಮಗೆ ಹಣ ಬರಬೇಕಿತ್ತು, ಇದುವರೆಗೂ ಏಕೆ ಬಂದಿಲ್ಲ, ಇದರಲ್ಲಿ ಯಾರ ತಪ್ಪಿದೆ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು. ನಾಳೆ ಸಭೆ ನಡೆಸಿ ನಡಾವಳಿಯನ್ನು ಮೇಲಧಿಕಾರಿಗಳಿಗೆ ಕಳಿಸಿಕೊಡುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶ್ರೀನಿವಾಸ ಚಿಂತಾಲ್ ನೀಡಿದ ಉತ್ತರದಿಂದ ರೈತರಿಗೆ ಸಮಾಧಾನವಾಗಲಿಲ್ಲ.
 ನಾವೆಲ್ಲ ವಿವಿಧ ಗ್ರಾಮಗಳಿಂದ ಬಂದಿದ್ದೇವೆ. ನಮಗೆ ಯಾವಾಗ ಹಣ ಕೊಡಿಸುತ್ತೀರೆಂದು ತಿಳಿಸಿ. ನಿಮ್ಮಿಂದ ಆಗದಿದ್ದರೆ ಹಾಗೆಂದು ಬರೆದುಕೊಡಿ ಎಂದು ಕೇಳಿದರು.
 ಬೆಳೆ ಹಾನಿಗೆ ಒಳಗಾದವರಲ್ಲಿ ಸಣ್ಣ ರೈತರು, ದೊಡ್ಡ ರೈತರೂ ಇದ್ದಾರೆ. ಸಚಿವರು, ಶಾಸಕರು, ಜಿಲ್ಲಾಧಿಕಾರಿ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಸಗೋಡು ಗ್ರಾಮದ ರೈತ ಕೆ.ಬಿ. ರವಿ ಹೇಳಿದರು.
 ಅದೇ ಗ್ರಾಮದ ಬಿ.ಎಸ್. ದೇವರಾಜ ಮಾತನಾಡಿ, ನಾನು 6 ಎಕರೆ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಳೆ ಇಲ್ಲದೆ ಬೆಳೆ ಹಾನಿಯಾಯಿತು. 1.50 ಲಕ್ಷ ರೂ. ಖರ್ಚು ಮಾಡಿದ್ದೆ. ವಿಮಾ ಪರಿಹಾರ ಬಂದರೆ ನಮಗೂ ಒಂದಿಷ್ಟು ಸಹಾಯವಾಗುತ್ತದೆ ಎಂದು ತಿಳಿಸಿದರು.