ದಾವಣಗೆರೆ: ಇಪಿಎಸ್ ಪಿಂಚಣಿದಾರರಿಗೆ ಕನಿಷ್ಟ 7,500 ರೂ. ಪಿಂಚಣಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಪಿಎಸ್ 95 ರಾಷ್ಟ್ರೀಯ ಆಂದೋಲನ ಸಮಿತಿಯು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಸಮಿತಿ ನೇತೃತ್ವದಲ್ಲಿ ನಗರದ ಕೆ.ಬಿ. ಬಡಾವಣೆಯ ನೌಕರರ ಭವಿಷ್ಯ ನಿಧಿ ಸಂಸ್ಥೆ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ದೇಶದ ವಿವಿಧ ವಲಯಗಳ ಸುಮಾರು 70 ಲಕ್ಷಕ್ಕೂ ಅಧಿಕ ನಿವೃತ್ತ ನೌಕರರು ಕೇವಲ 500ರಿಂದ 2000 ರೂ.ವರೆಗೆ ಅತ್ಯಂತ ಕಡಿಮೆ ಪಿಂಚಣಿ ಪಡೆಯುವ ಮೂಲಕ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇಪಿಎಫ್ ಅಧಿಕಾರಿಗಳ ನಕಾರಾತ್ಮಕ ಧೋರಣೆಯಿಂದ ಪಿಂಚಣಿದಾರರ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಸಮಿತಿ ಸಂಯೋಜಕ ಎಂ. ಶಾಂತಪ್ಪ ದೂರಿದರು.
ನೌಕರರ ಭವಿಷ್ಯನಿಧಿ ಕಚೇರಿಯ ಪ್ರಾದೇಶಿಕ ಆಯುಕ್ತರು ಕೂಡಲೇ ಇಪಿಎಸ್ ಪಿಂಚಣಿ ನೌಕರರಿಗೆ ಕನಿಷ್ಟ 7,500 ರೂ. ಪಿಂಚಣಿ, ತುಟ್ಟಿಭತ್ಯೆ, ವೈದ್ಯಕೀಯ ಚಿಕಿತ್ಸೆಯ ವೆಚ್ಚ ಹಾಗೂ ಪೂರ್ಣ ಪ್ರಮಾಣದ ಪಿಂಚಣಿ ಜತೆ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರಲ್ಲದೆ, ಈ ಬಗ್ಗೆ ದೇಶದ ಪ್ರಧಾನ ಮಂತ್ರಿ, ಕಾರ್ಮಿಕ ಮಂತ್ರಾಲಯ ಸೇರಿ ಕೇಂದ್ರ ಸರ್ಕಾರದ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಟಿ.ಮಂಜುನಾಥ್, ಗಂಗಾಧರ, ಮಲ್ಲಿಕಾರ್ಜುನ ತಂಗಡಗಿ, ಕೆ. ವಿರೂಪಾಕ್ಷಪ್ಪ, ದತ್ತಪ್ಪ ಶೆಟ್ಟರ್, ಎಂ.ಬಿ. ಸಿದ್ದಲಿಂಗಯ್ಯ, ಪಿ.ನಿಜಗುಣ, ಚಂದ್ರಪ್ಪ, ಸೋಮಶೇಖರ್, ಎಂ. ಬಸವರಾಜ್, ಮಹೇಶ್ವರಪ್ಪ, ಪ್ರಭಾಕರ್, ಮಂಜುನಾಥ್ ಸೂಡಂಬಿ ಪ್ರತಿಭಟನೆಯಲ್ಲಿದ್ದರು.