ಜಿಲ್ಲೆ

ಕೃಷ್ಣ ವೇಶ ಫೋಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ರಮೇಶ ಜಹಗೀರದಾರ್

ವಿಜಯವಾಣಿ ಸುದ್ದಿಜಾಲ ದಾವಣಗೆರೆ  ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಶೋರೂಮ್ನಲ್ಲಿ ಶನಿವಾರ ಬಾಲಗೋಪಾಲರ ಕಲರವ ತುಂಬಿತ್ತು. ಮುದ್ದು ಮಕ್ಕಳ ತುಂಟತನ, ನಗು, ಹಾವಭಾವಗಳು ಬಾಲ ಕೃಷ್ಣನ ಲೀಲೆಗಳನ್ನು ನೆನಪಿಸಿದವು.  ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ಡಿಜಿಟಲ್ ವಿಭಾಗ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.  ಜಿಲ್ಲೆಯ ವಿವಿಧೆಡೆಯಿಂದ ಮಕ್ಕಳೊಂದಿಗೆ ಪಾಲಕರು ಆಗಮಿಸಿದ್ದರು. ಅದೊಂದು ನಂದಗೋಕುಲದಂತೆ ಭಾಸವಾಯಿತು. ಆ ಪುಟಾಣಿಗಳು ಆಡಿದರು, ಓಡಿದರು, ಕುಣಿದರು. ಅಮ್ಮನ ತೋಳಲ್ಲಿ ಆಶ್ರಯ ಪಡೆದರು. ಒಮ್ಮೆ ನಗು, ಮತ್ತೊಮ್ಮೆ ಅಳುವ ಸದ್ದು. ಮಕ್ಕಳು ಏನೇ ಮಾಡಿದರೂ ಚೆಂದವೇ ಅಲ್ಲವೆ?.  ವಿಜಯವಾಣಿ ಪತ್ರಿಕೆಯವರು ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಮ್ಮ ಮಕ್ಕಳ ಫೋಟೋ ಆಯ್ಕೆಯಾದ ಬಗ್ಗೆ ಪಾಲಕರಲ್ಲಿ ಹೆಮ್ಮೆ ಇತ್ತು. ತಾವು ಕಷ್ಟಪಟ್ಟು ಅಲಂಕಾರ ಮಾಡಿ, ಮಗುವಿನ ಫೋಟೋ ತೆಗೆದು ಕಳಿಸಿದ್ದೂ ಸಾರ್ಥಕವಾಯಿತು ಎನ್ನುವ ಭಾವನೆ ಅವರಲ್ಲಿತ್ತು.  ಇಂಥ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುವ ವಿಜಯವಾಣಿ ಪತ್ರಿಕೆಯ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಯಿತು. ಪತ್ರಿಕೆಯ ಸಮಾಜಮುಖಿ ಕಾರ್ಯ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಓದುಗರಿಗೆ ಉಣಬಡಿಸುತ್ತಿರುವ ಬಗ್ಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.  ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಹಾಗೂ ಚಿತ್ರದುರ್ಗದ ಮಣಪ್ಪುರಂ ರಿತಿ ಜ್ಯೂವೆಲರ್ಸ್ ಸಹಯೋಗ ನೀಡಿದ್ದವು. ವಿಜಯವಾಣಿ ಸ್ಥಾನಿಕ ಸಂಪಾದಕ ನವೀನ ಎಂ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಿಎಸ್‌ಸಿ ಆಡಳಿತ ಮಂಡಳಿಯ ಪರವಾಗಿ ಸೆಲ್ವಕುಮಾರ್, ಸಂಸ್ಥೆಯ ಮೆನ್ಸ್ ಸ್ಟೋರ್‌ನ ಮ್ಯಾನೇಜರ್ ಪವನ್ ಕುಮಾರ್, ಲೇಡೀಸ್ ಸ್ಟೊರ್ ಮ್ಯಾನೇಜರ್ ಕಿರಣ ಕುಮಾರ್ ಇದ್ದರು.  ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು. ಮುಖ್ಯ ಉಪ ಸಂಪಾದಕ ಹರ್ಷ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು. ಜಾಹೀರಾತು ವಿಭಾಗದ ಮುಖ್ಯಸ್ಥ ಎಂ.ಎಸ್. ಕುಮಾರಸ್ವಾಮಿ, ಸೀನಿಯರ್ ಆಫೀಸರ್ ಸಿ.ಬಿ. ಶಶಿಧರ ಮೂರ್ತಿ, ಚಿತ್ರದುರ್ಗದ ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ ಇದ್ದರು. ಉಪ ಸಂಪಾದಕಿ ಶೋಭಾ ಗೌಡ ಪ್ರಾರ್ಥಿಸಿದರು.  ...