ದಾವಣಗೆರೆ : ಶ್ರೀಮದ್ ಜಯತೀರ್ಥರ (ಟೀಕಾಚಾರ್ಯರ) ವ್ಯಾಖ್ಯಾನಗಳು ಇಲ್ಲದಿದ್ದರೆ ಆಚಾರ್ಯ ಮಧ್ವರ ಗ್ರಂಥಗಳ ಸಾರವು ಅರ್ಥವಾಗುವುದಿಲ್ಲ ಎಂದು ಸಂಸ್ಕೃತ ಪ್ರಾಧ್ಯಾಪಕ ಜಯತೀರ್ಥಾಚಾರ್ ವಡೇರ್ ಹೇಳಿದರು. ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಶ್ರೀಮದ್ ಜಯತೀರ್ಥರ ಆರಾಧನಾ ಮಹೋತ್ಸವದಲ್ಲಿ ಪ್ರವಚನ ನೀಡಿದರು. ಆಚಾರ್ಯ ಮಧ್ವರು ಒಟ್ಟು 37 ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ 18 ಕೃತಿಗಳಿಗೆ ಜಯತೀರ್ಥರು ವ್ಯಾಖ್ಯಾನ ಮಾಡಿದ್ದಾರೆ. ಅಲ್ಲದೇ ಪದ್ಯಮಾಲಾ ಸೇರಿದಂತೆ 3 ಸ್ವತಂತ್ರ ಗ್ರಂಥಗಳನ್ನು ರಚಿಸಿದರು. ಅಣು ಭಾಷ್ಯಕ್ಕೆ ಅವರು ‘ಶ್ರೀ ಮನ್ಯಾಯ ಸುಧಾ’ ಬರೆದಿದ್ದಾರೆ. ಇದು ಮಾಧ್ವ ಸಂಪ್ರದಾಯದ ಅತ್ಯುತ್ಕೃಷ್ಟ ಕೃತಿಯಾಗಿದೆ ಎಂದು ಬಣ್ಣಿಸಿದರು. ಜಯತೀರ್ಥರು ಪೂರ್ವಾಶ್ರಮದಲ್ಲಿ ಮಳಖೇಡ ಪ್ರಾಂತದಲ್ಲಿ ಆಡಳಿತಗಾರರಾಗಿದ್ದರು. ಅಕ್ಷೋಭ್ಯ ತೀರ್ಥರ ಅನುಗ್ರಹದಿಂದ ಸನ್ಯಾಸ ಸ್ವೀಕರಿಸಿದರು. ಆಚಾರ್ಯ ಮಧ್ವರ ಕಾಲದಲ್ಲಿ ಅವರ ಗ್ರಂಥಗಳನ್ನು ಹೊರುವ ಎತ್ತು ಆಗಿದ್ದರು ಎಂದು ವಿವರಿಸಿದರು. ಭಗವಂತನ ಅನುಗ್ರಹವಿದ್ದರೆ ವ್ಯಕ್ತಿಯ ಬದುಕು ಹೇಗೆ ಬದಲಾಗುತ್ತದೆ ಎಂಬುದಕ್ಕೆ ಟೀಕಾಚಾರ್ಯರ ಜೀವನವೇ ಸಾಕ್ಷಿಯಾಗಿದೆ. ಪೀಠಾಧಿಪತಿ ಆಗಲು ಅರ್ಹತೆ ಬೇಕು. ಅವರು ತ್ಯಾಗಿ, ವೈರಾಗಿಯೂ ಆಗಿರಬೇಕು ಎಂದು ವಿಶ್ಲೇಷಿಸಿದರು. ಭಗವಂತನ ಮಹಾತ್ಮೆ ತಿಳಿದು, ಜ್ಞಾನವನ್ನು ಸಂಪಾದಿಸಿ ಸಾಧನೆಯ ದಾರಿಯಲ್ಲಿ ಸಾಗಿ ಭಗವಂತನ ಅನುಗ್ರಹ ಆದಾಗ ಮುಕ್ತಿ ಸಿಗುತ್ತದೆ. ಇದನ್ನು ಯಾರು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳಿದರು. ಆಧುನಿಕ, ಗಡಿಬಿಡಿಯ ಕಾಲದಲ್ಲಿ ಐಹಿಕ ವಿಷಯಗಳಲ್ಲಿ ಮುಳುಗಿರುವವರಿಗೆ ಮನಸ್ಸಿನ ಶಾಂತಿ ಇಲ್ಲ. ಹಾಗಾಗಿ ಧರ್ಮದ ಮಾರ್ಗದರ್ಶನ ಬೇಕಾಗುತ್ತದೆ. ಜಯತೀರ್ಥರ ತತ್ವಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು. ಶ್ರೀಮದ್ ಜಯತೀರ್ಥರ ಆರಾಧನಾ ಮಹೋತ್ಸವ ಅಂಗವಾಗಿ ಬೆಳಗ್ಗೆ ಶ್ರೀ ಹರಿವಾಯು ಸ್ತುತಿ ಪುರಶ್ಚರಣೆ, ನಂತರ ಶ್ರೀ ನಂದ ಕಿಶೋರ ಭಜನಾ ಮಂಡಳಿಯಿಂದ ಭಜನಾ ಸೇವೆ ನೆರವೇರಿತು. ಪ್ರವಚನ ಮಂಗಳದ ಮೊದಲು ತುಮಕೂರಿನ ಶ್ರೀ ಕೊರಟಗೆರೆ ವಾಸುದೇವಾಚಾರ್ ಹಾಗೂ ದಾವಣಗೆರೆ ಉತ್ತರಾದಿ ಮಠಾಧಿಕಾರಿಗಳಾದ ಶ್ರೀ ಪಾಂಡುರಂಗಾಚಾರ್ ಮಣ್ಣೂರ್ ಅವರಿಂದ ಪ್ರವಚನ ನಡೆಯಿತು. ಪ್ರಾಣೇಶ ಕಟ್ಟಿ, ನರಸಿಂಹಾಚಾರ್ ನವರತ್ನ, ಮಾಧವ ಪದಕಿ, ವೆಂಕಟಗಿರಿ, ಪ್ರಾಣೇಶ್ ಕುಲಕರ್ಣಿ, ರಘುನಾಥ್, ಶ್ರೀರಂಗ, ಸಾಹುಕಾರ ಗುರುರಾಜ್, ಗುರುರಾಜಾಚಾರ್ ಮಣ್ಣೂರ್, ರಾಮಚಂದ್ರ ಮಣ್ಣೂರ್ ಇದ್ದರು. ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.