ಚನ್ನಗಿರಿ : ಪೊಲೀಸ್ ವಶದಲ್ಲಿ ಆದಿಲ್ ಸಾವು ಪ್ರಕರಣದ ಸಂಬಂಧ ಚನ್ನಗಿರಿಗೆ ಆಗಮಿಸಿರುವ ಸಿಐಡಿ ತಂಡ ಸೋಮವಾರ ತನಿಖೆ ಚುರುಕುಗೊಳಿಸಿತು.
ಸಿಐಡಿ ವಿಭಾಗದ ಡಿವೈಎಸ್ಪಿ ಕನಕಲಕ್ಷ್ಮೀ ಸೇರಿ ನಾಲ್ವರು ಅಧಿಕಾರಿಗಳು ಠಾಣೆಯಲ್ಲಿ ದಾಖಲಾಗಿರುವ 6 ಪ್ರಕರಣಗಳ ಮಾಹಿತಿಯನ್ನು ಪಡೆದರು. ಕಲ್ಲು ತೂರಾಟದಲ್ಲಿ ಠಾಣೆಯ ಗಾಜು ಒಡೆದಿರುವುದು, ವಾಹನಗಳು ಜಖಂಗೊಂಡಿರುವುದನ್ನು ಪರಿಶೀಲಿಸಿದರು. ಗಾಯಗೊಂಡ ಸಿಬ್ಬಂದಿಯ ಬಗ್ಗೆ ಮಾಹಿತಿ ಪಡೆದರು. ಕಲ್ಲು ತೂರಾಟ ನಡೆದ ಸ್ಥಳವನ್ನು ವೀಕ್ಷಿಸಿದರು.
* ಪಿಎಸ್‌ಐ ಅಮಾನತು
ಘಟನೆ ಹಿನ್ನೆಲೆಯಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಸೋಮವಾರ ಪಿಎಸ್‌ಐ ಅಕ್ತರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆ ನಡೆದ ಮರುದಿನವೇ ಡಿವೈಎಸ್‌ಪಿ ಪ್ರಶಾಂತ್ ಮನ್ನೋಳಿ, ಪಿಐ ನಿರಂಜನ ಅವರ ತಲೆದಂಡವಾಗಿತ್ತು.
ಠಾಣೆಯ ಮೇಲೆ ಕಲ್ಲು ತೂರಿ, ಪೊಲೀಸ್ ವಾಹನಗಳಿಗೆ ಹಾನಿ ಮಾಡಿದ ಪ್ರಕರಣ ಸಂಬಂಧ ಈಗಾಗಲೆ 30 ಆರೋಪಿಗಳನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಸಿ ಟಿವಿ ದೃಶ್ಯಗಳನ್ನು ನೋಡಿ ವಿಚಾರಣೆಗೆ ಕರೆತರುವ ಕಾರ್ಯ ಮುಂದುವರೆದಿದೆ.
ಚನ್ನಗಿರಿ ಹಾಗೂ ವಿವಿಧ ಗ್ರಾಮಗಳಲ್ಲಿ ಕೆಲ ಯುವಕರು ಬಂಧನ ಭೀತಿಯಿಂದ ಮನೆ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಪಟ್ಟಣದಲ್ಲಿ ಪೊಲೀಸ್ ಬಿಗಿ ಭದ್ರತೆ ಇದ್ದು ಕ್ರಮೇಣ ಶಾಂತಿ ಮರುಕಳಿಸುತ್ತಿದೆ.
...
* ಪ್ರತಿಭಟನೆ
ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ, ಇಲಾಖೆಯ ವಾಹನಗಳ ಧ್ವಂಸ ಮತ್ತು ಅಧಿಕಾರಿಗಳ ಮೇಲಿನ ಹಲ್ಲೆಯನ್ನು ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.