ದಾವಣಗೆರೆ : ಪೊಲೀಸರ ತ್ಯಾಗ, ನಿಸ್ವಾರ್ಥ ಸೇವೆಯಿಂದಾಗಿ ನಾವು ನೆಮ್ಮದಿಯಿಂದ ಇದ್ದೇವೆ. ಈ ಸ್ಮರಣೆಯ ಜತೆಗೆ ನಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ದಾಮೋದರ್ ಕೆ. ಹೇಳಿದರು. ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಪೊಲೀಸರು ದೇಶದ ಸಮಗ್ರತೆಗೆ ಕೊಡುಗೆ ನೀಡಿದ್ದಾರೆ. ಇದನ್ನು ಅರಿತು ಅವರ ಕರ್ತವ್ಯ ನಿಷ್ಠೆ, ತ್ಯಾಗ, ಬಲಿದಾನದಿಂದ ಸ್ಫೂರ್ತಿ ಪಡೆಯಬೇಕು ಎಂದು ತಿಳಿಸಿದರು. ಕಾನೂನು, ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆ ಶ್ರಮಿಸುವ ಪೊಲೀಸರ ತ್ಯಾಗ ದೊಡ್ಡದು. ಇಂದಿನ ಮಕ್ಕಳು ಇದರ ಮಹತ್ವ ಅರಿಯಬೇಕು. ಪೊಲೀಸ್ ಸಮವಸ್ತ್ರಕ್ಕೆ ನ್ಯಾಯ ದೊಕಿಸುವ ಶಕ್ತಿಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ತವ್ಯದ ವೇಳೆ ಹುತಾತ್ಮರಾದ ದೇಶದ 191 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಾಮವಾಚನ ಮಾಡಿದರು. ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಎಚ್. ಇದ್ದರು. ಜಿಲ್ಲಾ ಸಶಸ್ತ್ರ ಮೀಡಲು ಪಡೆಯ ಡಿವೈಎಸ್ಪಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿನಾರಾಯಣ್, ಟಿ.ಎಸ್. ಮುರುಗಣ್ಣನವರ್, ಚಂದ್ರಪ್ಪ, ಪ್ರಹ್ಲಾದ್ ಇನ್ನಿತರರು ಪಾಲ್ಗೊಂಡಿದ್ದರು.