ಜಿಲ್ಲೆ

ಪೊಲೀಸರ ಮೇಲೆ ಹಲ್ಲೆ, ತಪ್ಪಿಸಿಕೊಳ್ಳಲು ಯತ್ನ

ರಮೇಶ ಜಹಗೀರದಾರ್

ದಾವಣಗೆರೆ : ರೌಡಿಶೀಟರ್ ಸಂತೋಷ ಕುಮಾರ್ ಅಲಿಯಾಸ್ ಕಣುಮನ ಹತ್ಯೆ ಪ್ರಕರಣದ ಆರೋಪಿ ಚಾವಳಿ ಸಂತು, ಬುಧವಾರ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಪ್ರತಿಯಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.  ಘಟನೆಯಲ್ಲಿ ನಗರ ಉಪ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಹಾಗೂ ಒಬ್ಬ ಕಾನ್‌ಸ್ಟೇಬಲ್‌ಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದ್ದು ಮೂವರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ದಾವಣಗೆರೆ ಹದಡಿ ರಸ್ತೆಯ ಕ್ಲಬ್‌ನಲ್ಲಿದ್ದ ಕಣುಮನನ್ನು ಸೋಮವಾರ, 8-10 ಜನರ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿತ್ತು. ಪ್ರಕರಣದ 10 ಜನ ಆರೋಪಿಗಳು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಚಿತ್ರದುರ್ಗ ಪೊಲೀಸರು ವಿಚಾರಣೆ ನಡೆಸಿದ ನಂತರ ಆರೋಪಿಗಳನ್ನು ದಾವಣಗೆರೆ ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಿದ್ದರು.  ದಾವಣಗೆರೆ ಪೊಲೀಸರು ಆರೋಪಿಗಳನ್ನು ಕರೆತಂದು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ಮೊಬೈಲ್‌ನ್ನು ಆವರಗೆರೆ ಬಳಿ ಎಸೆದಿದ್ದಾಗಿ ಆರೋಪಿ ಚಾವಳಿ ಸಂತು ಪೊಲೀಸರಿಗೆ ತಿಳಿಸಿದ್ದಾನೆ.  ಆಗ ಆತನನ್ನು ಪಂಚನಾಮೆಗಾಗಿ ಸಂಜೆ ಆವರಗೆರೆಗೆ ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ಚಾವಳಿ ಸಂತು, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಶೂಟ್ ಮಾಡಿದಾಗ ಆರೋಪಿಯ ಕಾಲಿಗೆ ಏಟು ಬಿದ್ದಿದೆ ಎಂದು ತಿಳಿದು ಬಂದಿದೆ.