ಜಿಲ್ಲೆ

ಜನರೊಂದಿಗೆ ಇರಲಿ ಸೌಜನ್ಯ, ಅನುಕಂಪ

ರಮೇಶ ಜಹಗೀರದಾರ್

ದಾವಣಗೆರೆ : ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯದಿಂದ ಜನರ ಸಮಸ್ಯೆ ಆಲಿಸಿ ಸ್ಪಂದಿಸಬೇಕು ಎಂದು ಪೂರ್ವ ವಲಯ ಡಿಐಜಿಪಿ ಬಿ. ರಮೇಶ್ ಹೇಳಿದರು.  ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ, ಪರೇಡ್ ಪರಿವೀಕ್ಷಣೆ ನಡೆಸಿ ಮಾತನಾಡಿ, ಸಾರ್ವಜನಿಕರು ಕಳ್ಳತನ, ಅಪಹರಣ ಇನ್ನಿತರ ದೂರುಗಳನ್ನು ನೀಡಲು ಠಾಣೆಗೆ ಬಂದಾಗ ಸೌಜನ್ಯದಿಂದ ಕೇಳಬೇಕು ಎಂದು ತಿಳಿಸಿದರು.  ಕೆಲವು ಪ್ರಕರಣಗಳನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕಾನೂನು, ಸುವ್ಯವಸ್ಥೆ ಕಾಪಾಡುವುದಷ್ಟೇ ನಮ್ಮ ಕರ್ತವ್ಯವಲ್ಲ. ಅಪರಾಧ ನಡೆಯುವುದನ್ನು ತಡೆಯಲು ದೇವರು ನಮಗೆ ಸಮವಸ್ತ್ರ ಕೊಟ್ಟಿದ್ದಾನೆ. ನಾವೂ ಮನುಷ್ಯರು ಎಂಬುದನ್ನು ಮರೆಯದೇ ಪ್ರತಿಯೊಬ್ಬರನ್ನು ಗೌರವಿಸಬೇಕು. ಕಷ್ಟದಲ್ಲಿರುವವರು ಕಣ್ಣೀರು ಹಾಕಿಕೊಂಡು ಠಾಣೆಗೆ ಬಂದಾಗ ಅವರ ಬಗ್ಗೆ ಅನುಕಂಪ ಹೊಂದಿರಬೇಕು ಎಂದರು.  ಪರೇಡ್‌ನಿಂದ ಶಿಸ್ತು ಮೈಗೂಡಿಸಿಕೊಳ್ಳುವುದರ ಜತೆಗೆ ಫಿಟ್‌ನೆಸ್ ಹೊಂದಲು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ವರ್ಷಕ್ಕೆ 6ರಿಂದ 8 ಬಾರಿ ಮಾತ್ರ ಪರೇಡ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ವಾರಕ್ಕೊಮ್ಮೆ ಪರೇಡ್ ನಡೆಸುವುದರ ಜತೆಗೆ ಒಂದು ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದ ಸಿಬ್ಬಂದಿಯನ್ನು ಗುರುತಿಸಿ ಎಸ್ಪಿ ಅವರು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಬೇಕು ಎಂದು ಸೂಚಿಸಿದರು.  ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಇಡೀ ಪೊಲೀಸ್ ತಂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಲೋಕಸಭೆ ಚುನಾವಣೆ, ಗಣೇಶೋತ್ಸವ ಮತ್ತು ದಸರಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವಲ್ಲಿ ಯಶಸ್ವಿಯಾಗಿದೆ.  ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಸಣ್ಣ ಘಟನೆಯನ್ನು ಮುಕ್ಕಾಲು ಗಂಟೆಯೊಳಗೆ ನಿಯಂತ್ರಣಕ್ಕೆ ತಂದು ಮರಳಿ ಶಾಂತಿ ಸ್ಥಾಪಿಸಲಾಯಿತು. ನಿಷೇಧಾಜ್ಞೆ ವಿಧಿಸುವ ವರೆಗೂ ಪರಿಸ್ಥಿತಿಯನ್ನು ಬಿಡದೇ ಉತ್ತಮ ರೀತಿಯಲ್ಲಿ ಘಟನೆಯನ್ನು ನಿರ್ವಹಣೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.  ಈ ವೇಳೆ ಕಳೆದ ಒಂದು ವರ್ಷದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೊಲೀಸ್ ಸಿಬ್ಬಂದಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ವಿತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಜಿ. ಮಂಜುನಾಥ್ ಇದ್ದರು.