ದಾವಣಗೆರೆ : ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ತಂತ್ರಜ್ಞಾನ ಕಲಿಕೆಯ ಜತೆಗೆ ನೈಪುಣ್ಯತೆ ಪ್ರದರ್ಶಿಸಲು ಕರ್ತವ್ಯ ಕೂಟ ಸಂಪೂರ್ಣ ಸಹಕಾರಿಯಾಗಿದೆ ಎಂದು ಪೂರ್ವವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಬಿ. ರಮೇಶ್ ಹೇಳಿದರು. ನಗರದ ಬಿಐಇಟಿ ಕಾಲೇಜಿನ ಎಸ್.ಎಸ್.ಎಂ ಕಲ್ಚರಲ್ ಸೆಂಟರ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಲಯ ಪೊಲೀಸ್ ಕರ್ತವ್ಯ ಕೂಟ-2024ರ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಧಿಕಾರಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸದಾ ಒತ್ತಡದ ನಡುವೆ ಇರುವ ನಮ್ಮ ಪೂರ್ವ ವಲಯದ ನಾಲ್ಕು ಜಿಲ್ಲೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಬೆರೆತು ಜ್ಞಾನ ವಿನಿಮಯ ಮಾಡಿಕೊಳ್ಳಲು ಸಹ ಕರ್ತವ್ಯ ಕೂಟ ಅತ್ಯುತ್ತಮ ವೇದಿಕೆಯಾಗಿದೆ ಎಂದು ಬಣ್ಣಿಸಿದರು. ಹಬ್ಬಗಳ ಬಂದೋಬಸ್ತ್ ಕಾರಣದಿಂದ ವಲಯ ಪೊಲೀಸ್ ಕರ್ತವ್ಯ ಕೂಟವನ್ನು ಈ ವರ್ಷ ಬೇಗ ನಡೆಸಲಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಸಾಕಷ್ಟು ಕಾಲಾವಕಾಶವಿದ್ದು, ಅಧಿಕಾರಿಗಳು ತಮ್ಮ ಜ್ಞಾನ ಸಾಮರ್ಥ್ಯ ಹೆಚ್ಚಿಸಿಕೊಂಡರೆ ವಲಯಕ್ಕೆ ಖಂಡಿತ ಬಹುಮಾನ ತಂದುಕೊಡಬಹುದು ಎಂದು ಹೇಳಿದರು. ಬೆಂಗಳೂರು ದಕ್ಷಿಣ ಎಸಿಪಿ ಶ್ರೀನಿವಾಸ್ ಮಾತನಾಡಿ, ವಲಯ ಪೊಲೀಸ್ ಕರ್ತವ್ಯ ಕೂಟ ಅತ್ಯಂತ ವ್ಯವಸ್ಥಿತವಾಗಿ ತರಬೇತಿ ಮತ್ತು ಸ್ಪರ್ಧೆಯ ರೀತಿಯಲ್ಲಿ ನಡೆಯಿತು ಎಂದರು. ಇತರೆ ಅಧಿಕಾರಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಶಿವಮೊಗ್ಗ ಪೊಲೀಸ್ ಅಧೀಕ್ಷಕ ಬಿ.ಕೆ. ಮಿಥುನ್‌ಕುಮಾರ್, ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್, ಹಾವೇರಿ ಪೊಲೀಸ್ ಅಧೀಕ್ಷಕ ಅಂಶುಕುಮಾರ್ ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲೆಯ ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಬಿ.ಎಸ್. ಬಸವರಾಜ್, ರುದ್ರಪ್ಪ ಉಜ್ಜಿನಕೊಪ್ಪ, ಎ.ಕೆ. ರುದ್ರೇಶ್, ಪಿ.ಬಿ. ಪ್ರಕಾಶ್, ದೊಡ್ಡಬಾತಿ ಆರ್‌ಎಫ್‌ಎಸ್‌ಎಲ್ ಉಪನಿರ್ದೇಶಕಿ ಛಾಯಕುಮಾರಿ, ಬೆಂಗಳೂರು ಎಸ್‌ಸಿಆರ್‌ಬಿ ಸೀನಿಯರ್ ಪ್ರೋಗ್ರಾಂ ಅಫೀಸರ್ ನಾಗೇಶ್, ಬೆಂಗಳೂರು ಸಿಐಡಿ ಘಟಕದ ಬಸವರಾಜ್ ಇತರರು ಇದ್ದರು. ದಾವಣಗೆರೆ ಜಿಲ್ಲೆಯ ಪೊಲೀಸ್ ತಂಡ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.