ಜಿಲ್ಲೆ

ಎಚ್‌ಎಸ್‌ವಿ ತವರು ಜಿಲ್ಲೆಯ ನೆನಪಿನ ಬುತ್ತಿ

ರಮೇಶ ಜಹಗೀರದಾರ್

ದಾವಣಗೆರೆ : ಶುಕ್ರವಾರ ನಿಧನರಾದ ನಾಡಿನ ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಜನಿಸಿದ್ದು, ಬಾಲ್ಯವನ್ನು ಕಳೆದಿದ್ದು ದಾವಣಗೆರೆ ಜಿಲ್ಲೆಯ ಹೊದಿಗೆರೆ ಗ್ರಾಮದಲ್ಲಿ.  ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಚ್‌ಎಸ್‌ವಿ ಅವರ ಬದುಕಿನ ಬೇರುಗಳು ಈ ಜಿಲ್ಲೆಯಲ್ಲಿವೆ. ಸುಮಧುರ ನೆನಪುಗಳ ಬುತ್ತಿಯನ್ನು ಅವರು ಬಿಟ್ಟು ಹೋಗಿದ್ದಾರೆ. ವೆಂಕಟೇಶ ಮೂರ್ತಿ ಅವರು ವಾಸಿಸುತ್ತಿದ್ದ ಹೆಂಚಿನ ಮನೆ ಈಗಲೂ ಹೊದಿಗೆರೆ ಗ್ರಾಮದಲ್ಲಿದೆ.  ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡರೂ ತವರು ಜಿಲ್ಲೆಯ ಸಂಪರ್ಕವನ್ನು ಅವರು ಬಿಟ್ಟಿರಲಿಲ್ಲ. ಊರಿನಲ್ಲಿ ಗಣೇಶೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಾಲ್ಯದ ಗೆಳೆಯ ಈಶ್ವರಚಂದ್ರ ಅವರೊಂದಿಗೆ ಅನೇಕ ಬಾರಿ ಹೊದಿಗೆರೆಗೆ ಬಂದು ಹೋಗಿದ್ದಾರೆ.  ಎಚ್‌ಎಸ್‌ವಿ ಅವರು ಹೊನ್ನಾಳಿಯಲ್ಲಿ 2011ರಲ್ಲಿ ನಡೆದ ಜಿಲ್ಲಾಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1997 ರಲ್ಲಿ ಹಿರೇಕೋಗಲೂರು ಗ್ರಾಮದಲ್ಲಿ ನಡೆದ ಚನ್ನಗಿರಿ ತಾಲೂಕುಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ದಾವಣಗೆರೆ ಜಿಲ್ಲೆಯ ಸಾಹಿತಿಗಳ ಒಡನಾಟವೂ ಅವರಿಗಿತ್ತು. ಸಾಹಿತ್ಯ ಸಂಬಂಧಿ ವಿವಿಧ ಕಾರ್ಯಕ್ರಮಗಳಲ್ಲೂ ಆಗಾಗ ಪಾಲ್ಗೊಳ್ಳುತ್ತಿದ್ದರು.  ‘ಹಿರೇಕೋಗಲೂರಿನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣೆಗಾಗಿ ಭವನವೊಂದನ್ನು ನಿರ್ಮಿಸಲಾಗಿತ್ತು. ಆ ಕಟ್ಟಡವೀಗ ಶಿಥಿಲವಾಗಿದೆ. ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಅದು ನಿರ್ಮಾಣವಾದರೆ ಉದ್ಘಾಟನೆಗೆ ಬರುವುದಾಗಿ ವೆಂಕಟೇಶ ಮೂರ್ತಿ ಅವರು ತಿಳಿಸಿದ್ದರು’ ಎಂದು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ನೆನಪು ಮಾಡಿಕೊಂಡರು.  ವೆಂಕಟೇಶ ಮೂರ್ತಿ ಅವರು ಮಲ್ಲಾಡಿಹಳ್ಳಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದು, ಸಂತೇಬೆನ್ನೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನೆನಪುಗಳನ್ನು ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್ ಮೆಲುಕು ಹಾಕಿದರು.