ಜಿಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ಫಿಜಿಯೋ ಥೆರಪಿಸ್ಟ್‌ಗಳ ನೇಮಕವಾಗಲಿ

ರಮೇಶ ಜಹಗೀರದಾರ್

ದಾವಣಗೆರೆ : ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಫಿಜಿಯೋ ಥೆರಪಿಸ್ಟ್‌ಗಳನ್ನು ನೇಮಕಾತಿ ಮಾಡಿ ಅದರ ಉಪಯೋಗ ನಾಗರಿಕರಿಗೆ ಸಿಗುವಂತೆ ಮಾಡಬೇಕು ಎಂದು ಅಂಗವಿಕಲರ ಪೋಷಕರ ಸಂಘ ಆಗ್ರಹಿಸಿದೆ.  ಸಂಘವು ಆಸ್ಪತ್ರೆಯ ಅಧೀಕ್ಷಕರಿಗೆ ಈ ಕುರಿತು ಮನವಿ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.  ಈ ಆಸ್ಪತ್ರೆಯಲ್ಲಿ 1967 ರಿಂದ ಫಿಜಿಯೋಥೆರಪಿ ವಿಭಾಗವಿದ್ದು ಅದರ ಉಪಯೋಗವು ಸಾರ್ವಜನಿಕರಿಗೆ ನಿರಂತರವಾಗಿ ಸಿಗುತ್ತಿದೆ. ಆಸ್ಪತ್ರೆಗೆ ಒಬ್ಬರು ಫಿಜಿಯೋಥೆರಪಿಸ್ಟ್ ಹಾಗೂ ಒಬ್ಬರು ಅಕ್ಯೂಪೆಷನಲ್ ಫಿಜಿಯೋಥೆರಪಿಸ್ಟ್ ಹುದ್ದೆ ಆಗಲೇ ಮಂಜೂರಾತಿ ಹೊಂದಿತ್ತು.  ಇದು ಸಾರ್ವಜನಿಕವಾಗಿ ತುಂಬಾ ಉಪಯುಕ್ತ, ಪುನಶ್ಚೇತನ ವ್ಯವಸ್ಥೆ ಹೊಂದಲು ಅವಕಾಶವಾಗಿತ್ತು. ಈಗ ನಮ್ಮ ಸಂಘಕ್ಕೆ ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ವಿಭಾಗ ಇಲ್ಲ ಎನ್ನುವ ಮಾಹಿತಿ ತಿಳಿಸಿದರು.  ಫಿಜಿಯೋ ಥೆರಪಿಯು ಸಾಮಾನ್ಯ ಜ್ಞಾನದ ಸಾಂದರ್ಭಿಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಈಗ ಜನರು ತಮ್ಮ ಆರೋಗ್ಯದ ಬಗ್ಗೆ ಅನವಶ್ಯಕವಾಗಿ ನಕಾರಾತ್ಮಕ ಭಾವನೆಯಿಂದ ಗೊಂದಲಕ್ಕೀಡಾಗುತ್ತಾರೆ. ಜನರಿಗೆ ನೈತಿಕ ಬೆಂಬಲ ಸಿಗುತ್ತಿಲ್ಲ. ಸಣ್ಣ ಸಣ್ಣ ಸಮಸ್ಯೆಗೂ ಹೆಚ್ಚು ಗಂಭೀರವಾಗಿ ಆತಂಕಕ್ಕೆ ಒಳಗಾಗುತ್ತಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.  ಫಿಜಿಯೋ ಥೆರಪಿಯಿಂದ ದೇಹ ಸಮಸ್ಥಿತಿ ಹೊಂದುವುದು. ಅವಯವಗಳ ಜಾಗರೂಕತೆಯ ಅವಿರತ ಚೇತನ ಶಕ್ತಿ ಉಳಿದು ಬಳಸುವುದು; ರೋಗ ನಿರೋಧಕ ಹಾಗೂ ರೋಗ ಬರದಂತೆ ಸಾಮಾನ್ಯ ಜೀವನ ನಿರ್ವಹಿಸುವ ಆತ್ಮಸ್ಥೈರ್ಯ ಹಾಗೂ ಆತ್ಮಬಲ ಹೆಚ್ಚಿಸಿ ಶಕ್ತಿಯ ಉತ್ಪಾದನೆ ಹಾಳಾಗದೇ ವೃದ್ಧಿಯಾಗುವ ಸಹಜ ಪ್ರಕ್ರಿಯೆ ಉಳಿಯುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.